ಅತಿವೃಷ್ಟಿ ಪ್ರದೇಶಗಳಿಗೆ ಸಚಿವರ ಭೇಟಿ
ತೀರ್ಥಹಳ್ಳಿ; ತಾಲೂಕಿನಾದ್ಯಂತ ಅತಿವೃಷ್ಟಿಯಿಂದಾಗಿ ಸರ್ಕಾರಿ ಆಸ್ತಿಪಾಸ್ತಿಗಳಿಗೆ, ಕೃಷಿ ಜಮೀನಿಗೆ ಸಾಕಷ್ಟು ಹಾನಿಯಾಗಿದೆ. ನೆರೆಯಿಂದಾಗಿ ತೊಂದರೆಗೊಳಗಾದ ಪ್ರದೇಶಗಳಿಗೆ ಸಚಿವ ಕಿಮ್ಮನೆ ರತ್ನಾಕರ್ ಮಂಗಳವಾರ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
ಕುಡುಮಲ್ಲಿಗೆ ಸಮೀಪದ ಕುನ್ನಳ್ಳಿಗೆ ಭೇಟಿ ನೀಡದ ಸಚಿವರು, ಅಲ್ಲಿ ಭೂಕುಸಿತದಿಂದ ಆಗಿರುವ ಅನಾಹುತವನ್ನು ಕಂಡರು. ಸುಮಾರು 500 ಮೀಟರ್ ಗುಡ್ಡ ಕುಸಿತಕ್ಕೊಳಗಾಗಿ, ಅಲ್ಲಿನ ನಿವಾಸಿಗಗರಿಗೆ ತೊಂದರೆಯುಂಟಾಗಿದೆ. ಪಕ್ಕದಲ್ಲೇ ಜಮೀನು, ತೋಟ, ಮನೆ ಮಾಡಿಕೊಂಡವರು ಆತಂತಕ್ಕೆ ಒಳಗಾಗಿದ್ದಾರೆ. ಮುಂದಿನ ದಿನಗಳಲ್ಲಿ ಹೀಗೆ ಗುಡ್ಡ ಕುಸಿತ ಮುಂದುವರೆದರೆ ವಾಸದ ಮನೆಯನ್ನೂ ಕಳೆದುಕೊಂಡು ಅಂತಂತ್ರರಾಗುವ ಭೀತಿ ಮನೆಮಾಡಿದೆ. ಈ ಪ್ರದೇಶಕ್ಕೆ ಸಚಿವರ ಭೇಟಿ ಇಲ್ಲಿಯ 15 ಕುಟುಂಬಗಳಿಗೆ ಮನೆ ನಿವೇಶನದ ಜಾಗ ಗುರುತಿಸಿ ಮಂಜೂರು ಮಾಡಲು ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ತಿಳಿಸಿದರು.
ಅತಿವೃಷ್ಟಿಯಿಂದಾಗಿ ತಾಲೂಕುನಲ್ಲಿ ಸುಮಾರು 70 ಕೋಟಿಗೂ ಹೆಚ್ಚು ಹಾನಿಯಾಗಿದ್ದು, ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ಕೊಡುವ ವ್ಯವಸ್ಥೆ ಮಾಡಲಾಗುವುದು. ರೈತರ ಜಮೀನಿಗೆ ತೊಂದರೆಯಾಗಿದ್ದರೆ ರಿಪೇರಿ ಕಾಮಗಾರಿಗಳ ಜೊತೆಗೆ ಜಮೀನಿಗೆ ನುಗ್ಗಿದ ಮಣ್ಣು-ಮರಳು ಬಗ್ಗೆಯೂ ಕಾಮಗಾರಿಯಲ್ಲೇ ಸೇರಿಸಿ ಅಂದಾಜುಪಟ್ಟಿ ತಯಾರಿಸುವುದು ಸೂಕ್ತ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಹಾರೊಗೊಳಿಗೆ ಗ್ರಾಪಂ ವ್ಯಾಪ್ತಿಯ ನೆಂಪೆ ಪ್ರದೇಶಕ್ಕೆ ಭೇಟಿ ನೀಡಿ, ಹಳ್ಳದ ಪಕ್ಕದ ಗುಡ್ಡ ಕುಸಿತದಿಂದಾದ ಹಾನಿಯನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷೆ ಜೀನಾವಿಕ್ಟರ್, ಜಿಪಂ ಸದಸ್ಯ ಹಾರೊಗೊಳಗೆ ಪದ್ಮನಾಭ, ಕುಡುಮಲ್ಲಿಗೆ ಗ್ರಾಪಂ ಉಪಾಧ್ಯಕ್ಷ ರಾಘವೇಂದ್ರ ಶೆಟ್ಟಿ, ಬಂಡೆ ವೆಂಕಟೇಶ್, ಎಂಪಿಎಂ ಅರಣ್ಯಾಧಿಕಾರಿ ಶ್ರೀಧರ್, ತಹಸೀಲ್ದಾರ್ ಗಣೇಶಮೂರ್ತಿ, ತಾಪಂ ಕಾರ್ಯನಿರ್ವಣಾಧಿಕಾರಿ ಪುಟ್ಟಸ್ವಾಮಿ, ಹಾರೊಗೊಳಿಗೆ ಗ್ರಾಪಂ ಅಧ್ಯಕ್ಷೆ ಸುಮಿತ್ರ ಜಗನ್ನಾಥ್ ಇದ್ದರು.