ಕೇಳೋರಿಲ್ಲದೆ ಪಾಳು ಬಿದ್ದ ಕ್ರೀಡಾಂಗಣ
ಕ.ಪ್ರ.ವಾರ್ತೆ , ಶಿರಾಳಕೊಪ್ಪ , ಆ.7
ಕಳೆದ ಕೆಲವರ್ಷಗಳ ಹಿಂದೆ ಕರ್ನಾಟಕ ಹೌಸಿಂಗ್ ಬೋರ್ಡ್ ಆಶ್ರಯದಲ್ಲಿ ರು. 80 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಶಿರಾಳಕೊಪ್ಪ ಇಂದಿರಾಗಾಂಧಿ ಕ್ರೀಡಾಂಗಣ ಇಂದು ಯಾವುದೇ ಕ್ರೀಡಾಕೂಟ ನಡೆಸಲು ಬಾರದಂತೆ, ಆಳೆತ್ತರ ಕಸ ಬೆಳೆದು, ಸ್ಟೇಡಿಯಂನ ತಗಡುಗಳೆಲ್ಲ ಒಡೆದು ಹಾಳು ಬಿದ್ದಿರುವುದರಿಂದ ಪಟ್ಟಣದ ಏಕಮೇವ ಕ್ರೀಡಾಂಗಣ ಇದ್ದೂ ಇಲ್ಲದಂತಾಗಿದೆ.
ಶಿರಾಳಕೊಪ್ಪದ ಕ್ರೀಡಾಂಗಣ ಕಾಮಗಾರಿ ಕೈಗೊಳ್ಳುವ ಮೊದಲು ಉತ್ತಮ ಕ್ರೀಡಾಂಗಣವಾಗಿತ್ತು. ಆದರೆ ಕ್ರೀಡಾಂಗಣ ನೂತನವಾಗಿ ನಿರ್ಮಾಣವಾಗುತ್ತಿದೆ ಎಂದು ಎಲ್ಲರೂ ಸಂತಸಪಟ್ಟರೆ ಅದು ಆದದ್ದೇ ಬೇರೆ. ಈ ಕ್ರೀಡಾಂಗಣವನ್ನು ನಾಲ್ಕನೂರು ಮೀಟರ್ ಕ್ರೀಡಾಂಗಣವಾಗಿ ನಿರ್ಮಿಸ ಬೇಕಾಗಿತ್ತು.
ಆದರೆ ಕರ್ನಾಟಕ ಹೌಸಿಂಗ್ ಬೋರ್ಡ್ ಇಲಾಖೆ ಎರಡುನೂರು ಮೀಟರ್ ಟ್ರ್ಯಾಕ್ ಮಾಡಿ ಇಂದು ಪ್ರಾಥಮಿಕ ಶಾಲೆಯ ಮಕ್ಕಳೂ ಆಟವಾಡಲು ಬಾರದಂತಾಗಿ ನಿರ್ಮಿಸಿ ಶಿರಾಳಕೊಪ್ಪ ಭಾಗದ ಕ್ರೀಡಾಭಿಮಾನಿಗಳ ನೆಮ್ಮದಿಯನ್ನೇ ಹಾಳು ಮಾಡಿದ್ದಾರೆ.
ಜಿಲ್ಲಾಮಟ್ಟದ ಕ್ರೀಡಾಕೂಟ ನಡೆದಿತ್ತು: ಅತ್ಯಂತ ಸಮತ್ತಟ್ಟಾದ ಕ್ರೀಡಾಂಗಣವೆಂದು ಹೆಸರು ಪಡೆದಿದ್ದ ಶಿರಾಳಕೊಪ್ಪ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ದಿ. ಮಾಸೂರು ನಾರಾಯಣಪ್ಪ ಪುರಸಭಾ ಅಧ್ಯಕ್ಷರಾಗಿದ್ದಾಗ ಜಿಲ್ಲಾ ಮಟ್ಟದ ಕ್ರೀಡಾಕೂಟ ನಡೆಸಲಾಗಿತ್ತು.
ಅಂತಹ ಕ್ರೀಡಾಂಗಣದ ಕಾಮಗಾರಿ ಕೈಗೆತ್ತಿಕೊಂಡ ಕರ್ನಾಟಕ ಹೌಸಿಂಗ್ ಬೋರ್ಡ್ ಇಂದು ಯಾವುದೇ ಕ್ರೀಡಾಕೂಟ ನಡೆಸಲು ಬಾರದಂತೆ ಇದ್ದ ಕ್ರೀಡಾಕೂಟವನ್ನು ಹಾಳು ಮಾಡಿಹೋಗಿದೆ.
ಟ್ರ್ಯಾಕ್ ನಿರ್ಮಾಣ ಮಾಡುವಾಗ ಕ್ರೀಡಾಂಗಣದ ಸುತ್ತಲಿದ್ದ ಗಟ್ಟಿಗೊಚ್ಚು ಮಣ್ಣನ್ನು ತೆಗೆದುಹಾಕಿ ಪಕ್ಕ ದಲ್ಲಿ ಇದ್ದ ಕಸಹಾಕಿ ಲಡ್ಡಾಗಿದ್ದ ಮಣ್ಣನ್ನು ಹಾಕಿ ಕ್ರೀಡಾಂಗಣವನ್ನು ಏರುಪೇರು ಮಾಡುತ್ತಿರುವಾಗ ಕೆಲ ವರ್ಷಗಳ ಹಿಂದೆ ಕನ್ನಡಪ್ರಭ ಪತ್ರಿಕೆ ಈ ಕಾರ್ಯವನ್ನು ತೀವ್ರವಾಗಿ ವಿರೋಧಿಸಿತ್ತು.
ಸುತ್ತಲೂ ಪಾರ್ಥೇನಿಯಂ: ಆಗ ಯಾರೊಬ್ಬರೂ ವಿರೋಧಿಸದ ಕಾರಣ ಇಂದು ಕ್ರೀಡಾಂಗಣ ತಗ್ಗು ಉಬ್ಬು ಆಗಿ ಕ್ರೀಡಾಂಗಣದ ಸುತ್ತ ಪಾರ್ಥೇನಿಯಂ ಬೆಳೆದು, ಬರಲಿರುವ ಸ್ವಾತಂತ್ರ್ಯ ದಿನೋತ್ಸವ ದಿನಕ್ಕೆ ಪಪಂ ಗಿಡ ಕಡಿಸಬೇಕಿದೆ.
ಹಾಗೆಯೇ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿರುವ ವಲಯಮಟ್ಟದ ಕ್ರೀಡಾಕೂಟ ನಡೆಸುವದಾದರೂ ಹೇಗೆ ಎಂದು ಚಿಂತಿಸುವಂತೆ ಆಗಿದೆ. ಈ ಕ್ರೀಡಾಂಗಣದಲ್ಲಿ ಮೊದಲು ಹಲವಾರು ಬಾರಿ ತಾಲೂಕು ಮಟ್ಟದ ಕ್ರೀಡೆಗಳು ನಡೆದಿದ್ದವು ಆದರೆ ಇಂದು ಚಿಕ್ಕಮಕ್ಕಳ ವಲಯಮಟ್ಟದ ಕ್ರೀಡಾಕೂಟ ನಡೆಸುವುದೂ ಅಸಾಧ್ಯವಾಗಿದೆ.
ವಾಹನಗಳ ತಾಣ: ವರ್ಷದ ಎಲ್ಲಾ ಕಾಲದಲ್ಲಿಯೂ ಒಂದಲ್ಲ ಒಂದು ದೈತ್ಯ ವಾಹನಗಳ ತಾಣವಾಗಿರುವ ಕ್ರೀಡಾಂಗಣದಲ್ಲಿ ಬೋರ್ವೆಲ್, ಬತ್ತ ಕೊಯ್ಯುವ ವಾಹನ ತಾಣವಾಗಿರುವ ಈ ಕ್ರೀಡಾಂಗಣದಲ್ಲಿ ಮಳೆಗಾಲದಲ್ಲಿ ಈ ವಾಹನ ಹೆಚ್ಚಾಗಿ ಓಡಾಡುವದರಿಂದ ಇಡೀ ಕ್ರೀಡಾಂಗಣ ಕೆಸರು ಗದ್ದೆ ಆಗಿದೆ.
ಸ್ಟೇಡಿಯಂ ಮೇಲೆ ಹಾಕಲಾದ ಸಿಮೆಂಟ್ ತಗಡುಗಳು ಮಾಡಿದ ಕಳಪೆ ಕಾಮಗಾರಿಯಿಂದ ಗಾಳಿಗೆ ಕೆಲವು ತಗಡು ಹಾರಿಹೋದರೆ, ಇನ್ನು ಕೆಲವು ರಾತ್ರಿ ಹೊತ್ತಿನಲ್ಲಿ ಪುಂಡ ಪೋಕರಿಗಳ ದಾಳಿಗೆ ಒಡೆದು ಹೋಗಿವೆ.
ಈವರೆಗೆ ಈ ಕ್ರೀಡಾಂಗಣವನ್ನು ಕ್ರೀಡಾ ಇಲಾಖೆ ಪಟ್ಟಣದ ಯಾವುದೇ ಶಾಲಾ ಕಾಲೇಜಿಗಾಗಲಿ ಅಥವಾ ಪಪಂ ಗಾಗಲಿ ಹಸ್ತಾಂತರಿಸಿಲ್ಲ. ಇಂದು ಈ ಬಗ್ಗೆ ಯಾರನ್ನು ಸಂಪರ್ಕಿಸಬೇಕು ಎಂಬವಿಷಯ ಯಾರಿಗೂ ತಿಳಿಯದಂತಾಗಿದೆ.
ಈ ಬಗ್ಗೆ ಸಂಭಂದಿಸಿದ ಅಧಿಕಾರಿಗಳು ಗಮನಹರಿಸುತ್ತಾರೆ ಎಂಬುದನ್ನು ಶಿರಾಳಕೊಪ್ಪ
ಪಟ್ಟಣದ ನಾಗರಿಕರು ನೋಡುತ್ತಾ ಕುಳಿತುಕೊಳ್ಳುವಂತಾಗಿದೆ.
- ಬಿ.ವಿ. ಶೇಷಗಿರಿ