ತಹಸೀಲ್ದಾರ್ ರಾಜಣ್ಣ ವಿರುದ್ಧ ಕ್ರಮಕ್ಕೆ ಒತ್ತಾಯ
ಕ.ಪ್ರ.ವಾರ್ತೆ , ಸಾಗರ , ಆ.7
ಭೂಮಿ ವ್ಯಾಜ್ಯಕ್ಕೆ ಸಂಬಂಧಪಟ್ಟಂತೆ ಮಾಹಿತಿ ಕೇಳಲು ಹೋಗಿದ್ದ ಪುಟ್ಟಸ್ವಾಮಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ತಹಸೀಲ್ದಾರ್ ಆರ್. ರಾಜಣ್ಣ ವಿರುದ್ಧ ಸೂಕ್ತಕ್ರಮ ಜರುಗಿಸುವಂತೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮಂಗಳವಾರ ಉಪವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಲಾಯಿತು.
ತಾಲೂಕಿನ ಅನಂದಪುರಂ ಹೋಬಳಿಯ ಹೆಬ್ಬರಿಗೆ- ಗೀಜಗ ಗ್ರಾಮ ವಾಸಿ ಪುಟ್ಟಸ್ವಾಮಿ ಅವರಿಗೆ ಸಂಬಂಧಪಟ್ಟ ಜಮೀನು ವ್ಯಾಜ್ಯ ತಹಸೀಲ್ದಾರ್ ನ್ಯಾಯಾಲಯದಲ್ಲಿ ನಾಲ್ಕು ವರ್ಷಗಳಿಂದ ನಡೆಯುತ್ತಿದೆ. ತಹಸೀಲ್ದಾರ್ ವ್ಯಾಜ್ಯ ಪರಿಹಾರಕ್ಕೆ ವಿಳಂಬಧೋರಣೆ ಅನುಸರಿಸುತ್ತಿರುವ ವಿರುದ್ಧ ಪುಟ್ಟಸ್ವಾಮಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
ಧಮಕಿ: ತಹಸೀಲ್ದಾರ್ ಆರ್. ರಾಜಣ್ಣ ಭೂಮಿವ್ಯಾಜ್ಯ ಕುರಿತು ಮಾಹಿತಿ ತಿಳಿಯಲು ಕಚೇರಿಗೆ ಬರುವಂತೆ ಪುಟ್ಟಸ್ವಾಮಿಗೆ ತಿಳಿಸಿದ್ದಾರೆ. ದಲಿತ ಮುಖಂಡ ಪರಮೇಶ್ವರ ದೂಗೂರು ಜೊತೆ ಹೋಗಿದ್ದ ಸಂದರ್ಭದಲ್ಲಿ ರಾಜಣ್ಣ ಅಶ್ಲೀಲ ಶಬ್ದಗಳಿಂದ ನಿಂದಿಸಿದ್ದಾರೆ. ನನ್ನ ವಿರುದ್ಧ ಲೋಕಾಯುಕ್ತಕ್ಕೆ ದೂರು ಕೊಡುತ್ತೀಯಾ. ನನ್ನ ಕಚೇರಿಗೆ ಬಂದರೆ ತಲೆ ಒಡೆಯುತ್ತೇನೆ. ಕುತ್ತಿಗೆ ಹಿಡಿದು ಹೊರಗೆ ದಬ್ಬಿಸುತ್ತೇನೆ ಎಂದು ಬೆದರಿಕೆ ಹಾಕಿ ಜಮೀನು ವ್ಯಾಜ್ಯವನ್ನು ನಿನ್ನ ವಿರುದ್ಧ ಮಾಡುತ್ತೇನೆ ಎಂದು ಧಮಕಿ ಹಾಕಿದ್ದಾರೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಸಾರ್ವಜನಿಕರೊಂದಿಗೆ ತಹಸೀಲ್ದಾರ್ ಆರ್. ರಾಜಣ್ಣ ದೌರ್ಜನ್ಯದಿಂದ ನಡೆದುಕೊಳ್ಳುತ್ತಿದ್ದು, ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಪುಟ್ಟಸ್ವಾಮಿ ಅವರನ್ನು ಅಶ್ಲೀಲ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿ ಮಾನಸಿಕ ಕಿರುಕುಳ ನೀಡಿದ್ದಾರೆ. ತಕ್ಷಣ ತಹಸೀಲ್ದಾರ್ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯ ಪರಮೇಶ್ವರ ದೂಗೂರು, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರವಿ ಕುಗ್ವೆ, ಪ್ರಮುಖರಾದ ಟಿ.ವಿ. ಮಲ್ಲೇಶಪ್ಪ, ನಾಗರಾಜಸ್ವಾಮಿ, ನಾಗೇಂದ್ರಪ್ಪ ದೊಡ್ಮನಿ ಒತ್ತಾಯಿಸಿದ್ದಾರೆ.