ನವಿಲು ಸಂತತಿಗೆ ತಂದ ಆಪತ್ತು
ಕ.ಪ್ರ.ವಾರ್ತೆ , ಹೊಸನಗರ , ಆ.7
ಮಾಣಿ ಜಲಾಶಯದಲ್ಲಿ ವಿಪರೀತ ಮಳೆಯಾಗುತ್ತಿರುವ ಕಾರಣ ನವಿಲು ಸಂತತಿಗೆ ಆಪತ್ತು ತಂದಿದೆ. ಎಡಬಿಡದೆ ಸುರಿದ ಮಳೆಗೆ ಬೆಂಡಾಗಿ ಹತ್ತಾರು ನವಿಲುಗಳು ಸಾವನಪ್ಪಿದ ಶಂಕೆ ಕೂಡ ಗ್ರಾಮಸ್ಥರಿಂದ ವ್ಯಕ್ತವಾಗಿದೆ.
ಯಡೂರು ಗ್ರಾಪಂ ವ್ಯಾಪ್ತಿಯ ಬಿಳಿಗಾರೆ ಗುಡ್ಡ ಸೇರಿದಂತೆ ಮಾಣಿ ಜಲಾಶಯದ ಸುತ್ತಮುತ್ತಲ ಪ್ರದೇಶದಲ್ಲಿ ನವಿಲುಗಳು ನೂರಾರು ಸಂಖ್ಯೆಯಲ್ಲಿವೆ. ಈ ಭಾಗದಲ್ಲಿ ಇಲ್ಲಿಯವರೆಗೆ 8000 ಮಿಮೀ ಮಳೆಯಾಗಿದೆ ಕಳೆದ ವರ್ಷ ಕೇವಲ 4500 ಮಿಮೀ ಮಳೆಯಾಗಿದ್ದು ಅರ್ಧದಷ್ಟು ಹೆಚ್ಚಾಗಿದೆ. ಇದರ ಪರಿಣಾಮ ನವಿಲುಗಳ ಜೀವದ ಮೇಲೆ ಪರಿಣಾಮ ಬೀರುತ್ತಿದೆ.
ನವಿಲಿನ ಆರೈಕೆ: ಹೀಗೆ ಮರವೊಂದರ ಕೆಳೆಗೆ ತೊಯ್ದು ತೊಪ್ಪೆಯಾಗಿದ್ದ ನವಿಲೊಂದನ್ನು ಕಂಡ ಯಡೂರು ರಾಜಾರಾಂ ಹೆಗಡೆ ಎಂಬುವವರು ನವಿಲನ್ನು ಮನೆಗೆ ತಂದು ಆರೈಕೆ ಮಾಡಿದ್ದಾರೆ. ಕೊಟ್ಟಿಗೆಯ ಒಲೆಯಲ್ಲಿ ಬೆಚ್ಚನೆಯ ಶಾಖ ನೀಡಿ, ಸುಧಾರಿಸಿಕೊಂಡ ಬಳಿಕ ಮತ್ತೆ ಕಾಡಿಗೆ ಬಿಟ್ಟಿರುವುದಾಗಿ ತಿಳಿಸಿದ್ದಾರೆ.
ನವಿಲುಗಳಿಗೆ ಕುತ್ತು: ಜಡಿಮಳೆಗೆ ತೊಯ್ದ ನವಿಲುಗಳು ಶೀತರೋಗಕ್ಕೆ ತುತ್ತಾಗುತ್ತಿದ್ದು ನಂತರ ಸಾವನಪ್ಪುತ್ತಿವೆ. ಅದರಲ್ಲೂ ಉದ್ದನೆಯ ಗರಿಗಳನ್ನು ಹೊಂದಿದ ಗಂಡು ನವಿಲುಗಳ ಸ್ಥಿತಿ ಹೇಳದಂತಾಗಿದೆ. ಈ ಭಾಗದ ಸುತ್ತಮುತ್ತಲ ಪರಿಸರದಲ್ಲಿ ನವಿಲುಗಳ ಸಂತತಿ ಸಾಕಷ್ಟಿದ್ದು ಈ ಬಾರಿಯ ಮಳೆಯಿಂದ ತೊಂದರೆ ಅನುಭವಿಸುತ್ತಿವೆ.
ಮಾಣಿ ಜಲಾಶಯದ ಹಿನ್ನೀರು ಏರಿದಂತೆ ಇತ್ತ ಹಾರಲು ಆಗದೆ, ಓಡಲು ಆಗದೆ ಹಿನ್ನೀರಿಗೆ ಆಹುತಿಯಾಗುತ್ತಿವೆ ಎಂದು ಹೇಳಲಾಗುತ್ತಿದೆ.
ಬೇಸಿಗೆಯಲ್ಲಿ ಬೆಟ್ಟದ ಪ್ರದೇಶದಲ್ಲಿ ನಲಿಯುತ್ತಾ ಸಂಭ್ರಮದಿಂದ ಓಡಾಡುವ ನವಿಲುಗಳಿಗೆ ಇಲ್ಲಿಯ ವಿಪರೀತ ಮಳೆ ಆತಂಕ ಸೃಷ್ಟಿ ಮಾಡಿವೆ. ಈ ಬಾರಿಯ ಮಳೆಗೆ ಐದಾರು ನವಿಲುಗಳು ಸಾವನಪ್ಪಿರುವುದನ್ನು ನೋಡಿರುವ ಸ್ಥಳೀಯರು ನೋವು ವ್ಯಕ್ತಪಡಿಸುತ್ತಾರೆ.