ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ರಸ್ತೆ, ಬೀದಿದೀಪ: ಅಗತ್ಯ ಕ್ರಮಕ್ಕೆ ಕೆಜೆಪಿ ಆಗ್ರಹ

Vishwanath S
Updated On : 8 Aug 2013, 12:14 pm

ಕ.ಪ್ರ.ವಾರ್ತೆ  ಶಿವಮೊಗ್ಗ  ಆ.7 ಶಿವಮೊಗ್ಗ ನಗರದಲ್ಲಿ ನಗರಸಭೆ ಆಡಳಿತ ವರ್ಗ ಹಾಗೂ ಅಧಿಕಾರಿ ವರ್ಗ ಸಂಪೂರ್ಣ ನಿಷ್ಕ್ರಿಯವಾಗಿದ್ದು ನಗರದ ಸಾರ್ವಜನಿಕರು ಹಿಡಿಶಾಪ ಹಾಕುವಂತಾಗಿದ್ದು, ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೆಜೆಪಿ ಜಿಲ್ಲಾ ಘಟಕ ಜಿಲ್ಲಾಧಿಕಾರಿಯವರನ್ನು ಒತ್ತಾಯಿಸಿದೆ.
ಬುಧವಾರ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿದ ಪಕ್ಷದ ಮುಖಂಡರು ಮನವಿ ಅರ್ಪಿಸಿದರು.
ಶಿವಮೊಗ್ಗ ನಗರದಲ್ಲಿ ಎಲ್ಲಾ ರಸ್ತೆಗಳು ಗುಂಡಿಗಳಿಂದ ಕೂಡಿದ್ದು, ಮಳೆಯಲ್ಲಿ ಜನ ಸಂಚರಿಸುವುದು ಹಾಗೂ ವಾಹನ ಚಾಲಕರಿಗೆ ಸಂಚರಿಸಲು ಯೋಗ್ಯ ರಸ್ತೆಗಳೇ ಇಲ್ಲವಾಗಿದೆ ಎಂದು ತಿಳಿಸಲಾಗಿದೆ.
ರಸ್ತೆಯ ಗುಂಡಿಗಳಲ್ಲಿ ಮಳೆ ನೀರು ತುಂಬಿದ್ದು, ರಸ್ತೆಯಲ್ಲಿ ಜನ ಸಂಚರಿಸುವುದೇ ಕಷ್ಟಸಾಧ್ಯವಾಗಿದೆ. ರಸ್ತೆಯಲ್ಲಿರುವ ಗುಂಡಿಗಳಿಂದ ದ್ವಿಚಕ್ರವಾಹನ ಸವಾರರು ಅಪಘಾತದಿಂದ ಆಸ್ಪತ್ರೆಗೆ ಸೇರುವಂತಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ದೀಪ ನಿರ್ವಹಮೆ ಇಲ್ಲ: ನಗರದಲ್ಲಿ ಬೀದಿ ದೀಪಗಳ ನಿರ್ವಹಣೆ ಸಂಪೂರ್ಣ ಸ್ಥಗಿತವಾಗಿದ್ದು, ಸಾವಿರಕ್ಕೂ ಹೆಚ್ಚು ಬೀದಿ ದೀಪ ಹಾಳಾಗಿದೆ. ಇದರಿಂದ ಕತ್ತಲೆಯಲ್ಲೇ ಜನ ಓಡಾಡುವಂತಾಗಿದೆ.
   ಹೀಗಾಗಿ ಕಳ್ಳಕಾಕರಿಗೆ ಅನುಕೂಲವಾಗಿದ್ದು, ನಗರದಲ್ಲಿ ಕಳವು ಹೆಚ್ಚಾಗಿದೆ ಎಂದು ಕೆಜೆಪಿ ಆರೋಪಿಸಿದೆ.
ನಗರದ ಸ್ವಚ್ಛತೆ ಕಾರ್ಯ ಕುಂಠಿತಗೊಂಡಿದ್ದು, ಹಲವಾರು ಕಡೆ ಕಸದ ರಾಶಿಯಿಂದ ಕೂಡಿರುತ್ತದೆ ಇದರಿಂದ ಡೆಂಘೀ ಹಾಗೂ ಇತರ ಮಾರಕ ಕಾಯಿಲೆ ಭೀತಿಯಿಂದ ಜನ ತತ್ತರಿಸಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶ್, ನಗರಾಧ್ಯಕ್ಷ ಬಿಳಿಕಿ ಕೃಷ್ಣಮೂರ್ತಿ, ಅಶೋಕ್ ಪೈ, ಐಡಿಯಲ್ ಗೋಪಿ, ಬಳ್ಳೆಕೆರೆ ಸಂತೋಷ್, ದಿನೇಶ್, ಮಾಲತಿ ಶೇಖರ್, ಕವಿತಾ ನಾಗರಾಜ್, ಮಂಜುನಾಥ ಬೊಮ್ಮನಕಟ್ಟೆ, ಅರ್ಚನಾ ಬಳ್ಳೆಕೆರೆ, ಸತೀಶ್, ಮಾಲತೇಶ್, ಗೌರಿ ಶ್ರೀನಾಥ್ ಮತ್ತಿತರರು ಈ ಸಂದರ್ಭದಲ್ಲಿ  ಇದ್ದರು.
ಕೊಳಚೆ ಪ್ರದೇಶದ ನಿವಾಸಿಗಳಿಗೆ ಮನೆ ನಿರ್ಮಿಸಿ: ಶಿವಮೊಗ್ಗ: ನಗರದ ರಾಗಿಗುಡ್ಡ ಬಡಾವಣೆಯ ಬೈಲುಕಮ್ಮಾರ ಕೇರಿ ಕೊಳಚೆ ಪ್ರದೇಶದ ನಿವಾಸಿಗಳಿಗೆ ಮನೆ ನಿರ್ಮಿಸಲು ರಿಯಾಯಿತಿ ದರದಲ್ಲಿ ಜಮೀನು ನೀಡಬೇಕು ಎಂದು ಕೆಜೆಪಿ ಜಿಲ್ಲಾಧ್ಯಕ್ಷ ಎಸ್.ಎಸ್. ಜ್ಯೋತಿಪ್ರಕಾಶಅ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಬೈಲುಕಮ್ಮಾರ ಕೇರಿ ಕೊಳಚೆ ಪ್ರದೇಶದಲ್ಲಿ ಸುಮಾರು 167 ಕುಟುಂಬಗಳಿಗೆ ಏಕಕಾಲಕ್ಕೆ ಪುನರ್ವಸತಿ ಕಲ್ಪಿಸಿ, ಸ್ಥಳಾಂತರ ಮಾಡುವಂತೆ ಹೈಕೋರ್ಟ್ ಆದೇಶ ಹೊರಡಿಸಿದೆ.
 ನಿವಾಸಿಗಳಿಗೆ ನೆರವಾಗುವ ಉದ್ದೇಶದಿಂದ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘ ತಾಲೂಕಿನ ತ್ಯಾವರೆಚಟ್ನಹಳ್ಳಿ ಗ್ರಾಮದ ಸರ್ವೆ ನಂಬರ್ 176ರಲ್ಲಿರುವ 1 ಎಕರೆ ಖುಷ್ಕಿ ಜಮೀನನ್ನು ಕೊಳಗೇರಿ ಅಭಿವೃದ್ಧಿ ಮಂಡಳಿಗೆ ದಾನ ಪತ್ರದ ಮೂಲಕ ನೋಂದಣಿ ಮಾಡಿಕೊಂಡಿದೆ.
ಆದರೆ, 1 ಎಕರೆ ಜಮೀನಿನಲ್ಲಿ ಏಕಕಾಲಕ್ಕೆ 167 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಸಾಧ್ಯವಾಗುವುದಿಲ್ಲ. ಕೇವಲ 45 ಮನೆ ಮಾತ್ರ ನಿರ್ಮಿಸಲು ಸಾಧ್ಯ. ಆದರಿಂದ ನಗರಕ್ಕೆ ಹತ್ತಿರದ ಪ್ರದೇಶದಲ್ಲಿ ರಿಯಾಯಿತಿ ದರದಲ್ಲಿ 5 ಎಕರೆ ಜಮೀನನ್ನು ನೀಡಲು ಜಿಲ್ಲಾಡಳಿತ ತುರ್ತು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement