ವಂಚನೆ ಆರೋಪ: ಕಂಪನಿ ಕಚೇರಿ ಮೇಲೆ ದಾಳಿ
ಕ.ಪ್ರ.ವಾರ್ತೆ ಭದ್ರಾವತಿ ಆ.7
ಪಟ್ಟಣದಲ್ಲಿ ಖಾಸಗಿ ಕಂಪನಿಯೊಂದು ಜನರಿಗೆ ರಿಲಯನ್ಸ್ ಜೀವವಿಮಾ ಪಾಲಿಸಿಗಳನ್ನು ನೀಡುವುದಾಗಿ ನಂಬಿಸಿ ವಂಚನೆಗೈಯುತ್ತಿದ್ದುದನ್ನು ಖಂಡಿಸಿ ಶಾಸಕ ಎಂ.ಜೆ.ಅಪ್ಪಾಜಿ ಮತ್ತು ಸಾರ್ವಜನಿಕರು ಕಂಪನಿಯ ಕಚೇರಿಗೆ ಮುತ್ತಿಗೆ ಹಾಕಿ ದಾಖಲೆಗಳನ್ನು ಪರಿಶೀಲಿಸಿದ ಘಟನೆ ಬುಧವಾರ ನಡೆದಿದೆ.
ಪಟ್ಟಣದ ಹಾಲಪ್ಪ ವೃತ್ತದಲ್ಲಿರುವ ಇಂಡಿಯನ್ ಇನ್ಫೋಲೈನ್ ಲಿಮಿಟೆಡ್ ಐಐಎಫ್ಎಲ್ ಸಂಸ್ಥೆಯು ಸಾರ್ವಜನಿಕರಿಗೆ ಹಣ ಹೂಡುವ ಯೋಜನೆಗಳನ್ನು ಪರಿಚಯಿಸಿ ಅದರಲ್ಲಿ ಹಣ ತೊಡಗಿಸುವಂತೆ ಸಾರ್ವಜನಿಕರನ್ನು ಪ್ರೇರೇಪಿಸಿ ನಂತರ ವಂಚನೆ ಮಾಡಿದೆ ಎಂದು ಸಾರ್ವಜನಿಕರು ಶಾಸಕರಿಗೆ ನೀಡಿದ ದೂರಿನ ಮೇಲೆ ಶಾಸಕರು ತಹಶೀಲ್ದಾರ್ ಸಿದ್ದಮಲ್ಲಪ್ಪ ಅವರ ನೇತೃತ್ವದಲ್ಲಿ ಕಂಪನಿಯ ಕಚೇರಿಯ ಮೇಲೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಹಣ ಹಿಂತಿರುಗಿಸಿ: ಈಗಾಗಲೇ ಬಹಳಷ್ಟು ಕಂಪನಿಗಳು ಈ ರೀತಿ ಪಟ್ಟಣದಲ್ಲಿ ಗ್ರಾಹಕರನ್ನು ವಂಚಿಸಿವೆ. ಐಐಎಫ್ಎಲ್ ಕಂಪನಿಯ ಭದ್ರಾವತಿ ಕಚೇರಿಯಲ್ಲಿ ಹಣ ತೊಡಗಿಸಿದವರಿಗೆ ಕೂಡಲೇ ಅವರವರ ಹಣವನ್ನು ಹಿಂದಿರುಗಿಸಬೇಕೆಂದು ಅಪ್ಪಾಜಿ ಪಟ್ಟುಹಿಡಿದರು.
ಏತನ್ಮಧ್ಯೆ ಕಂಪನಿಯ ಅಧಿಕಾರಿಗಳು ಕನ್ನಡಪ್ರಭ ಕಚೇರಿಯನ್ನು ಸಂಪರ್ಕಿಸಿ ತಮ್ಮ ಕಂಪನಿಯ ವಿಮಾ ಪಾಲಿಸಿಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಿ ಎರಡು ವರ್ಷಗಳಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ತಹಸೀಲ್ದಾರ್ ಎಚ್ಚರಿಕೆ: ತಹಶೀಲ್ದಾರ್ ಸಿದ್ದಮಲ್ಲಪ್ಪ ಮತ್ತು ಶಾಸಕ ಎಂ.ಜೆ.ಅಪ್ಪಾಜಿಯವರು ದಾಖಲೆಗಳನ್ನು ಪರಿಶೀಲಿಸಿದಾಗ ಸಹ ಇದು ಸ್ಥಿರಪಟ್ಟಿದೆ.
ಕಂಪನಿಯು ವಿಮೆ ಮಾಡಿಸುವ ವಾಗ್ದಾನವನ್ನು ಗ್ರಾಹಕರಿಗೆ ಮಾಡುವುದು ಕಂಡುಬಂದರೆ ಕಂಪನಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಎಚ್ಚರಿಕೆ ನೀಡಿದರು.
ಕಂಪನಿಯ ಗ್ರಾಹಕರುಗಳಾದ ಅನಿತ, ಸೌಭಾಗ್ಯ, ಕಿರಣ್, ಸರೋಜಮ್ಮ, ಮುರಳಿ, ಇಂದ್ರಮ್ಮ, ಜಯಶ್ರೀ, ಪ್ರವೀಣ್ ಮುಂತಾದವರು ತಹಶೀಲ್ದಾರರಿಗೆ ಕಂಪನಿಯ ವಿರುದ್ಧ ದೂರು ಸಲ್ಲಿಸಿದ್ದಾರೆ.
ಪತ್ನಿ ಆತ್ಮಹತ್ಯೆ: ಪತಿಯ ಬಂಧನ
ಭದ್ರಾವತಿ: ಗೃಹಿಣಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಬುಧವಾರ ಪಟ್ಟಣದ ಜನ್ನಾಪುರದಲ್ಲಿ ನಡೆದಿದೆ.
ಜನ್ನಾಪುರದ ಬಟ್ಟೆ ವ್ಯಾಪಾರಿ ಮೋಹನ ಅವರ ಪತ್ನಿ ಪದ್ಮಶ್ರೀ ಬುಧವಾರ ಮಧ್ಯಾಹ್ನ ಜನ್ನಾಪುರದಲ್ಲಿರುವ ತನ್ನ ಮನೆಯಲ್ಲಿ ಸೂರಿಗೆ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪದ್ಮಶ್ರೀಯವರ ತಂದೆ ದೇವರಾಜರಾವ್ ತಮ್ಮ ಮಗಳ ಸಾವಿಗೆ ಆಕೆಗೆ ಚಿತ್ರಹಿಂಸೆ ನೀಡುತ್ತಿದ್ದ ಪತಿ ಮೋಹನ್ ಮತ್ತು ಅತ್ತೆ-ಮಾವ ಕಾರಣವೆಂದು ದೂರಿನಲ್ಲಿ ತಿಳಿಸಿದ್ದಾರೆ. ಮೋಹನ್ ಅವರನ್ನು ನ್ಯೂಟೌನ್ ಪೊಲೀಸರು ಬಂಧಿಸಿದ್ದಾರೆ.