ಸೈನಿಕರ ಹತ್ಯೆಗೆ ಜಿಲ್ಲಾ ಕಾಂಗ್ರೆಸ್ ಖಂಡನೆ
ಶಿವಮೊಗ್ಗ: ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೈನಿಕರನ್ನು ಪಾಕಿಸ್ತಾನ ಸೈನಿಕರು ಹತ್ಯೆ ಮಾಡಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗದ ಸದಸ್ಯರು ಬುಧವಾರ ಗೋಪಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಪಾಕಿಸ್ತಾನ ಸೈನಿಕರು ಪದೇ- ಪದೇ ಭಾರತೀಯ ಗಡಿಯೊಳಗೆ ನುಸುಳಿ ಬರುತ್ತಿದ್ದು, ಭಾರತೀಯ ಸೈನಿಕರನ್ನು ಹತ್ಯೆ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಭಾರತೀಯ ಸೈನಿಕನ ತಲೆಯನ್ನು ಕತ್ತರಿಸಿ ತನ್ನ ಪೈಶಾಚಿಕ ಕೃತ್ಯ ಪ್ರದರ್ಶಿಸಿತು. ಇದೀಗ ಭಾರತೀಯ ಐವರು ಸೈನಿಕರನ್ನು ಕೊಂದು ತನ್ನ ವಿಕೃತ ಮನಸ್ಥಿತಿಯನ್ನು ಸಾಭೀತು ಪಡಿಸಿದೆ. ಈ ಮೂಲಕ ಭಾರತೀಯರ ತಾಳ್ಮೆಯನ್ನು ಕೆಣಕುವ ಕೆಲಸ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ತಕ್ಕ ಪಾಠ ಕಲಿಸಿ: ಪಾಕಿಸ್ತಾನದ ಈ ಕೃತ್ಯ ಯುದ್ಧಕ್ಕೆ ಪ್ರಚೋದಿಸುವಂತಿದೆ. ಕೂಡಲೇ ಭಾರತ ಸರ್ಕಾರ ವಿಶ್ವ ಸಂಸ್ಥೆಯೊಂದಿಗೆ ಚರ್ಚಿಸಿ, ಒತ್ತಡ ಹೇರಿ ಪಾಕಿಸ್ತಾನ ಸರ್ಕಾರದ ವಿರುದ್ಧ ಕ್ರಮಕ್ಕೆ ಆಗ್ರಹಿಸಬೇಕು. ಇಲ್ಲವಾದಲ್ಲಿ ಯುದ್ಧ ಘೋಷಣೆ ಮಾಡಿ ಶತ್ರುಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಿಭಾಗದ ಅಧ್ಯಕ್ಷ ಕೆ. ದೇವೇಂದ್ರಪ್ಪ, ನಗರಾಧ್ಯಕ್ಷ ಹುಸೇನ್, ಎನ್ಎಸ್ಯುಐ ಅಧ್ಯಕ್ಷ ಚೇತನ್, ರಘು, ರಂಗನಾಥ್, ದಿನೇಶ್, ಮಂಜುನಾಥ್, ಶಬರೀಶ್ ಮತ್ತಿತರರು ಇದ್ದರು.