11ರಿಂದ ಬೆಳ್ಳಿ ಮಂಡಲದ ಚಿತ್ರೋತ್ಸವ ಸರಣಿ
ಶಿವಮೊಗ್ಗ: ವಾರ್ತಾ ಇಲಾಖೆಯ ಅಂಗಸಂಸ್ಥೆ ಶಿವಮೊಗ್ಗ ಬೆಳ್ಳಿ ಮಂಡಲದ 4ನೇ ವರ್ಷದ ಚಿತ್ರೋತ್ಸವ ಸರಣಿ ಆಗಸ್ಟ್ 11ರಿಂದ 13ರವರೆಗೆ 3ದಿನಗಳು ನಗರದ ಕರ್ನಾಟಕ ಸಂಘ ಭವನದಲ್ಲಿ ನಡೆಯಲಿದೆ ಎಂದು ಬೆಳ್ಳಿಮಂಡಲದ ಗೌರವಾಧ್ಯಕ್ಷ, ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ತಿಳಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಚಿತ್ರೋತ್ಸವ ಸರಣಿ ಕುರಿತು ವಿವರ ನೀಡಿದ ಅವರು, ಮೌಲ್ಯಾಧಾರಿತ ಚಲನಚಿತ್ರಗಳನ್ನು ಜನರ ಬಳಿಗೆ ತರುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಬೆಳ್ಳಿಮಂಡಲ ಶಿವಮೊಗ್ಗ ಶಾಖೆ ರಾಜ್ಯದಲ್ಲಿಯೇ ಮಾದರಿಯಾಗಿ ಕೆಲಸ ನಿರ್ವಹಿಸು ತ್ತಿದ್ದು, ಶಿವಮೊಗ್ಗದ ಜನತೆಯ ಪ್ರೋತ್ಸಾಹ ಅಗತ್ಯವಿದೆ ಎಂದರು.
11ರಂದು ಸಂಜೆ 6.30ಕ್ಕೆ ಕರ್ನಾಟಕ ಸಂಘ ಭವನದಲ್ಲಿ ಚಿತ್ರೋತ್ಸವ ಸರಣಿಯನ್ನು ಚಲನಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ಬಿ. ಸುರೇಶ್ ಉದ್ಘಾಟಿಸಲಿದ್ದಾರೆ. ಅಂದಿನ ಸಮಾರಂಭದಲ್ಲಿ ಹಿರಿಯ ಚಿತ್ರ ವಿಮರ್ಶಕ ಶ್ರೀಪಾದ್ ಭಟ್, ಬೆಳ್ಳಿ ಮಂಡಲದ ಮಹಾ ಪೋಷಕ ಹಾಗೂ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಬೆಳ್ಳಿಮಂಡಲದ ಕಾರ್ಯಾಧ್ಯಕ್ಷ ಡಾ. ಅಶೋಕ್ಪೈ, ಬೆಳ್ಳಿಮಂಡಲದ ಸಂಚಾಲಕ ವೈದ್ಯ ಅವರನ್ನು ಅಭಿನಂದಿಸಲಾಗುವುದು. ಕೂರ್ಮಾವತಾರ ಚಿತ್ರದ ಗಾಂಧಿ ಪಾತ್ರಧಾರಿ ಶಿಕಾರಿಪುರ ಕೃಷ್ಣಮೂರ್ತಿ ಉಪಸ್ಥಿತರಿರುವರು.
ಗಿರೀಶ್ ಕಾಸರವಳ್ಳಿ ನಿರ್ದೇಶನದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕೂರ್ಮಾವತಾರ ಚಿತ್ರ ಪ್ರದರ್ಶನ, ಸಂವಾದ ಏರ್ಪಡಿಸಲಾಗಿದೆ.
ಆಗಸ್ಟ್ 12ರಂದು ಪಿ. ಶೇಷಾದ್ರಿ ನಿರ್ದೇಶನದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಭಾರತ್ ಸ್ಟೋರ್ಸ್ ಚಿತ್ರ ಪ್ರದರ್ಶನ, ಸಂವಾದ ನಡೆಯಲಿದೆ.
ಅಂದು ಕಾದಂಬರಿಗಾರ್ತಿ ಜಯಶ್ರೀ ಅವರನ್ನು ಅಭಿನಂದಿಸಲಾಗುವುದು. ಅಂದಿನ ಸಮಾರಂಭದಲ್ಲಿ ಚಿತ್ರ ನಿರ್ದೇಶಕ ಪಿ. ಶೇಷಾದ್ರಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಲಾವಿದ ಎಚ್.ಪಿ. ದತ್ತಾತ್ರೇಯ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಸಿಕಾಂತ್ ಸೆಂಥಿಲ್ ಉಪಸ್ಥಿತರಿರುತ್ತಾರೆ.
ಆಗಸ್ಟ್ 13ರಂದು ಸಂಜೆ 6.30ಕ್ಕೆ ನಾಗಾಭರಣ ನಿರ್ದೇಶನದ ಕಂಸಾಳೆ ಕೈಸಾಳೆ ಚಿತ್ರ ಪ್ರದರ್ಶನ ಹಾಗೂ ಸಂವಾದ ನಡೆಯಲಿದ್ದು, ನಿವೃತ್ತ ಪ್ರಾಚಾರ್ಯ ಹಾಗೂ ಲೇಖಕ ಪ್ರೊ.ಸಿ.ಎಸ್. ನಂಜುಂಡಯ್ಯ ಅವರನ್ನು ಸನ್ಮಾನಿಸಲಾಗುವುದು.
ಸಮಾರಂಭದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಟಿ.ಎಸ್. ನಾಗಾಭರಣ, ನಿರ್ಮಾಪಕಿ ನಾಗಿಣೀಭರಣ, ನೃತ್ಯ ಕಲಾವಿದ ಹಾಗೂ ನಾಯಕ ನಟ ಶ್ರೀಧರ್ ಉಪಸ್ಥಿತರಿರುತ್ತಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬೆಳ್ಳಿ ಮಂಡಲದ ಉಪಾಧ್ಯಕ್ಷ ಎಸ್.ವಿ. ತಿಮ್ಮಯ್ಯ, ಅಶ್ವತ್ಥನಾರಾಯಣ ಶೆಟ್ಟಿ, ಸಂಚಾಲಕ ವೈದ್ಯ, ಕಾರ್ಯದರ್ಶಿ ಡಾ. ನಾಗಭೂಷಣ್, ಚೇತನ್ ಇದ್ದರು.
ಪೋಷಕ ಸದಸ್ಯತ್ವ: ಶಿವಮೊಗ್ಗ ಬೆಳ್ಳಿ ಮಂಡಲ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಈ ಸಾಲಿನಲ್ಲಿ ಪೋಷಕ ಸದಸ್ಯತ್ವ ಅಭಿಯಾನ ಆರಂಭಿಸಲಾಗಿದೆ.
ಆಗಸ್ಟ್ 11ರ ಭಾನುವಾರದಿಂದ ವಾರ್ಷಿಕ ಚಟುವಟಿಕೆ ಆರಂಭವಾಗಲಿದ್ದು, ಮುಂದಿನ ಆಗಸ್ಟ್ ವರೆಗೆ ಒಂದು ವರ್ಷದಲ್ಲಿ ಮೂರು ಸಿನಿಮಾ ಉತ್ಸವಗಳು, ಮಕ್ಕಳ ಚಿತ್ರೋತ್ಸವಗಳು, ಅಂತರಾಷ್ಟ್ರೀಯ ಚಿತ್ರೋತ್ಸವ, ದಸರಾ ಚಿತ್ರೋತ್ಸವ ಸೇರಿದಂತೆ ಹಲವು ಚಿತ್ರೋತ್ಸವಗಳು, ಚಲನಚಿತ್ರ ರಸಗ್ರಹಣ ಶಿಬಿರಗಳು, ಸಂವಾದ ಕಾರ್ಯಕ್ರಮ ನಡೆಸಲಾಗುತ್ತದೆ.
ಪೋಷಕ ಸದಸ್ಯತ್ವ ಶುಲ್ಕ ಒಬ್ಬರಿಗೆ 300 ರುಪಾಯಿ ನಿಗದಿಯಾಗಿದ್ದು, ಆಸಕ್ತರು ವೈದ್ಯ (98444 56505) ಅವರನ್ನು ಸಂಪರ್ಕಿಸಲು ಶಿವಮೊಗ್ಗ ಜಿಲ್ಲಾಧಿಕಾರಿ ವಿಫುಲ್ ಬನ್ಸಾಲ್ ಕೋರಿದ್ದಾರೆ.