ಅಪ್ಪಣ್ಣ ಶ್ರೀ ಜಯಂತ್ಯುತ್ಸವ
ಕ.ಪ್ರ.ವಾರ್ತೆ ಸೊರಬ ಆ.7
ಧರ್ಮ ಸಮಾಜದ ಒಂದು ಅವಿಭಾಜ್ಯ ಅಂಗವಾಗಿರುವುದರಿಂದ ಸಮಾಜದ ಬೆಳವಣಿಗೆಗೆ ಧರ್ಮ ಅತ್ಯಗತ್ಯ ಎಂದು ಹಡಪದ ಮಹಾಸಂಸ್ಥಾನ ಮಠದ ಅನ್ನದಾನ ಭಾರತಿ ಅಪ್ಪಣ್ಣ ಶ್ರೀ ಹೇಳಿದರು.
ತಾಲೂಕು ಜಡೆ ಗ್ರಾಮದಲ್ಲಿ ನಡೆದ ಬಸವಪ್ರಿಯ ಹಡಪದ ಅಪ್ಪಣ್ಣ ಶ್ರೀ ಜಯಂತ್ಯುತ್ಸವ ಮತ್ತು ಜನಜಾಗೃತಿ ಸಭೆಯಲ್ಲಿ ಆಶಿರ್ವಚನ ನೀಡಿ ಮಾತನಾಡಿದರು.
ಮಾನವಧರ್ಮ ದೊಡ್ಡದು ಎಂಬುದನ್ನು ಅರಿತು, ಅಹಂಕಾರ ತ್ಯಜಿಸಿ, ಧರ್ಮದೊಂದಿಗೆ ನಾಡನ್ನು ಕಟ್ಟುವ ಕಾರ್ಯವಾಗಬೇಕು ಎಂದ ಅವರು ಹಡಪದ ಜನಾಂಗವನ್ನು ಪ್ರವರ್ಗ 1ಕ್ಕೆ ಸೇರಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಕೊಡುಗೆ ಅಪಾರ: ಸಮಾಜದ ರಾಜ್ಯಾಧ್ಯಕ್ಷ ಅಣ್ಣಾರಾವ್ ನರಿಬೋಳ್ ಮಾತನಾಡಿ, ಬಸವಣ್ಣನವರ ಅನುಯಾಯಿ ಅಪ್ಪಣ್ಣ ಸ್ವಾಮೀಜಿಯವರು ಸಮಾಜದ ಏಳಿಗೆಗೆ ನೀಡಿರುವ ಕೊಡುಗೆ ಅಪಾರ, ಅವರ ಆದರ್ಶ, ಸೇವೆ ಗಮನಿಸಿ ಸನ್ಮಾರ್ಗದಲ್ಲಿ ನಡೆಯುವುದರಿಂದ ಸಮಾಜದ ಉತ್ತಮ ಬೆಳವಣಿಗೆ ಸಾಧ್ಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಜಿಪಂ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್ ಮಾತನಾಡಿ, ನೀತಿವಂತ ಬದುಕಿಗೆ ಧರ್ಮ ಅಗತ್ಯ, ನೀತಿ ಇಲ್ಲದೆ ಸಮಾಜ ಏಳಿಗೆ ಅಸಾಧ್ಯ ಎಂದರು.
ಜಡೆ ಸಂಸ್ಥಾನ ಮಠದ ಡಾ.ಮಹಾಂತ ಶ್ರೀಗಳು, ತಾಪಂ ಅಧ್ಯಕ್ಷ ಸದಾನಂದಗೌಡ, ಗ್ರಾಪಂ ಅಧ್ಯಕ್ಷೆ ನಾಗರತ್ನ, ಸಮಾಜದ ಜಿಲ್ಲಾಧ್ಯಕ್ಷ ಶಾಂತವೀರಪ್ಪ, ತಾಲೂಕು ಅಧ್ಯಕ್ಷ ಜಗದೀಶ್, ಆರ್.ಎಚ್.ಗುಡ್ಡಪ್ಪ, ಪಾಲಾಕ್ಷಪ್ಪ, ರುದ್ರಗೌಡ ಕಮರೂರು, ಬಿ.ಮಲ್ಲಿಕಾರ್ಜುನ್. ಹಾಲಪ್ಪ ಮೊದಲಾದವರು ಇದ್ದರು.