ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಆಹಾರ ಕೊರತೆಗೆ ಸಂಸ್ಕರಣೆಯೊಂದೇ ಮದ್ದು

Vishwanath S
Updated On : 9 Aug 2013, 11:58 am

ಕ.ಪ್ರ.ವಾರ್ತೆ  ಶಿವಮೊಗ್ಗ  ಆ.8
ದೇಶದ ಆಹಾರ ಪದಾರ್ಥಗಳ ಕೊರತೆ ನೀಗಿಸಲು ಆಹಾರ ಸಂಸ್ಕರಣೆಯೊಂದೇ ಮಾರ್ಗ ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ಅಭಿಪ್ರಾಯ ಪಟ್ಟಿದ್ದಾರೆ.
ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಆಹಾರ ಸಂಸ್ಕರಣಾ ಅಭಿಯಾನದಡಿ ಆಹಾರ ಸಂಸ್ಕರಣೆ ಉದ್ದಿಮೆ ಸ್ಥಾಪಿಸಲು ಇರುವ ಅವಕಾಶಗಳು ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ಪಾದನೆ ಕೊರತೆ: ಮುಂದಿನ 30ರಿಂದ 40ವರ್ಷಗಳಲ್ಲಿ ದೇಶದಲ್ಲಿ ಕೃಷಿ ಕ್ಷೇತ್ರ ಕ್ರಮೇಣ ಕಡಿಮೆಯಾಗಲಿದೆ. ಇದರಿಂದ ಆಹಾರ ಉತ್ಪಾದನೆ ಕಡಿಮೆಯಾಗುವುದರಿಂದ ಕೊರತೆ ಕಾಡಲಿದೆ. ಇದನ್ನು ಸರಿದೂಗಿಸಲು ಉತ್ಪಾದನೆ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದರು.
ಪ್ರಸ್ತುತ ನಮ್ಮಲ್ಲಿ ಸಂಸ್ಕರಣಾ ಕ್ರಮ ಇಲ್ಲದಿರುವುದರಿಂದ ಆಹಾರ ಉತ್ಪಾದನೆಯ ಶೇ.50ರಷ್ಟು ನಷ್ಟ ಸಂಭವಿಸುತ್ತಿದೆ. ಇದರಿಂದ ರೈತರಿಗೆ ಅಪಾರ ಪ್ರಮಾಣದಲ್ಲಿ ನಷ್ಟವಾಗುತ್ತಿದ್ದು, ಆಹಾರ ಸಂಸ್ಕರಣಾ ಕ್ರಮವನ್ನು ಜಾರಿಗೊಳಿಸುವುದರಿಂದ ಹಾಗೂ ಈ ಬಗ್ಗೆ ಉತ್ತೇಜನ ನೀಡುವುದರಿಂದ ಆಹಾರ ಕೊರತೆ ನೀಗಿಸಬಹುದಾಗಿದೆ. ಇದರಿಂದ ರೈತರಿಗೂ ಹಾಗೂ ಉದ್ದೀಮೆಗಳಿಗೂ ಅನುಕೂಲವಿದೆ ಎಂದರು.
ಶೇ.50ರಷ್ಟು ನಷ್ಟ: ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿ ಪಿ.ಎಂ. ಸಾಲೀಮಠ ಮಾತನಾಡಿ ಭಾರತದ ಜನಸಂಖ್ಯೆ ಕಡಿಮೆ ಇದ್ದ ಸ್ವಾತಂತ್ರ್ಯ ಪೂರ್ವ ಹಾಗೂ ನಂತರದಲ್ಲೂ ದೇಶದಲ್ಲಿ ಆಹಾರ ಕೊರತೆ ಇದೆ. ಇತ್ತೀಚಿನವರೆಗೂ ಆಹಾರ ಕೊರತೆಯನ್ನು ಕಾಣಬಹುದಾದರೂ ವೈಜ್ಞಾನಿಕ ಅಭಿವೃದ್ಧಿಯಿಂದಾಗಿ ಸ್ವಲ್ಪಮಟ್ಟಿನ ಸುಧಾರಣೆ ಕಂಡಿದೆ.
 ಆದರೂ ಆಹಾರ ಸಂಸ್ಕರಣೆಯಾಗದೆ ಶೇ.50ರಷ್ಟು ನಷ್ಟ ಸೇರಿದಂತೆ, ಬೆಳೆ ಬೆಳೆಯುವಾಗ ರೋಗಕ್ಕೆ ತುತ್ತಾಗಿ ಮತ್ತಷ್ಟು ನಷ್ಟ ಸಂಭವಿಸುವುದರಿಂದ ಅಪಾರ ಪ್ರಮಾಣದ ಆಹಾರ ಕೊರತೆ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಆತಂಕವನ್ನು ದೂರ ಮಾಡಲು ಹಾಗೂ ರೈತರಲ್ಲಿ ವಿಶ್ವಾಸ ಮೂಡಿಸಲು ಬೆಳೆಗಾರರಿಗೆ ಆಧುನಿಕ ತಂತ್ರಜ್ಞಾನದ ಬಗ್ಗೆ ಜಾಗೃತಿ ಮೂಡಿಸಲು ಅವಶ್ಯಕತೆ ಇದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಸಿಕಾಂತ್ ಸೆಂಥಿಲ್ ಮಾತನಾಡಿ, ಆಹಾರ ಸಂಸ್ಕರಣೆ ಹೊಸ ವಿಷಯವಲ್ಲ. ಆದರೆ, ಹಿಂದೆಂದಿಗಿಂತಲೂ ಇಂದಿನ ಅಗತ್ಯತೆ ಹೆಚ್ಚಿರುವುದು ಮುಖ್ಯ ಎಂದು ಹೇಳಿದರು.
ಜಾಗತೀಕರಣದ ಹಿನ್ನೆಲೆಯಲ್ಲಿ ಆಹಾರ ಸಂಸ್ಕರಣೆ ಬಗ್ಗೆ ರೈತರಿಗೆ ಹೊಸ ವ್ಯಾಖ್ಯಾನದ ಜ್ಞಾನ ಅಗತ್ಯವಿದೆ. ತಮ್ಮ ಉತ್ಪಾದನೆಯನ್ನು ಸಂಸ್ಕರಿಸುವ ಮೂಲಕ ತ್ಯಾಜ್ಯವನ್ನು ಕಡಿಮೆ ಮಾಡಬಹುದಾದ ತಂತ್ರಜ್ಞಾನದ ಮೂಲಕ ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ರಾಷ್ಟ್ರೀಯ ಆಹಾರ ಸಂಸ್ಕರಣಾ ಅಭಿಯಾನದ ಸಂಚಾಲಕ ಡಾಣಲೀಲಾವತಿ, ಸಿಎಸ್ಡಿ ಮುಖ್ಯಸ್ಥ ಡಾ. ಪಿ.ಎಸ್. ತಾಂಡವಮೂರ್ತಿ, ಹಿರಿಯ ಅಧಿಕಾರಿ ವಿಷಕಂಠ, ಡಾ. ಶಿವಮೂರ್ತಪ್ಪ, ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement