ಭಾರಿ ಮಳೆಗೆ 38 ಕೋಟಿ ನಷ್ಟ
ಶಿವಮೊಗ್ಗ: ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಯಿಂದಾಗಿ ಈವರೆಗೆ ಸುಮಾರು 38 ಕೋಟಿ ಮೌಲ್ಯದ ಆಸ್ತಿಪಾಸ್ತಿ ಹಾನಿ ಯಾಗಿದೆ ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ತಿಳಿಸಿದ್ದಾರೆ.
ಗುರುವಾರ ಈ ವಿಷಯ ತಿಳಿಸಿದ ಅವರು, 11 ಸಾವಿರ ಎಕರೆ ಕೃಷಿ ಹಾಗೂ 4,500 ಎಕರೆ ತೋಟಗಾರಿಕೆ ಬೆಳೆಗಳು ಮಳೆಯಿಂದಾಗಿ ನಷ್ಟಕ್ಕೆ ಕಾರಣವಾಗಿದೆ.
ಇದಲ್ಲದೆ, ರಸ್ತೆ, ಸೇತುವೆ, ಕೆರೆಗಳು, ಮನೆ ಇತ್ಯಾದಿಗಳಿಗೆ ಹಾನಿ ಸಂಭವಿಸಿ ಅಪಾರ ನಷ್ಟ ಉಂಟಾಗಿದೆ. ಪುನರ್ ನಿರ್ಮಾಣಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದ್ದು, ಕೆಲವೆಡೆ ನೀರು ನಿಂತಿರುವುದರಿಂದ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ವಿಳಂಬವಾಗುತ್ತಿದೆ ಎಂದರು.
5 ಕೋಟಿ ಬಿಡುಗಡೆ: ಜಿಲ್ಲೆಯಲ್ಲಿ ಸಂಭವಿಸಿದ ಒಟ್ಟು ಹಾನಿ ಪ್ರಮಾಣಕ್ಕೆ ತಕ್ಕಂತೆ ಪರಿಹಾರ ಹಣ ತಕ್ಷಣ ಸಿಗುತ್ತಿಲ್ಲ. ಆದರೆ, ರಾಜ್ಯ ಸರ್ಕಾರದಿಂದ ಈಗಾಗಲೇ 5 ಕೋಟಿ ಬಿಡುಗಡೆ ಮಾಡಲಾಗಿದೆ. ಅಂತೆಯೇ ಪ್ರಕೃತಿ ವಿಕೋಪ ನಿಧಿಯಿಂದ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಈ ಹಿಂದಿನ ಪ್ರಕೃತಿ ವಿಕೋಪ ಪರಿಹಾರ ನಿಧಿಯ ಮಾರ್ಗಸೂಚಿ ಪರಿಷ್ಕರಣೆಗೊಂಡಿದ್ದು. ಈ ಹಿಂದೆ ಹಾನಿಗೆ ಸಂಬಂಧಿಸಿದಂತೆ ನೀಡಲಾಗುತ್ತಿದ್ದ ಪರಿಹಾರ ಮೊತ್ತ ದ್ವಿಗುಣ ಮಾಡಲಾಗಿದೆ ಎಂದರು.
ಮಳೆಯಿಂದಾಗಿ ನಗರ ಪ್ರದೇಶದಲ್ಲಿ ಹಾನಿಯಾಗಿರುವ ರಸ್ತೆಗಳ ಪುನರ್ ನಿರ್ಮಾಣಕ್ಕೆ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದಲೂ ಅನುದಾನ ಒದಗಿಸಲಾಗುವುದು.
ಜೊತೆಗೆ ಸಂಬಂಧಿಸಿದ ಇಲಾಖೆಯಿಂದಲೂ ಅನುದಾನ ಕ್ರೋಢೀಕರಿಸಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪ್ರಸ್ತುತ ಶಿವಮೊಗ್ಗ ನಗರ ಪ್ರದೇಶದಲ್ಲಿ ಜಾರಿಯಾಗಿರುವ ಮನೆ- ಮನೆ ಕಸ ಸಂಗ್ರಹಣಾ ಪದ್ಧತಿ ಉತ್ತಮವಾಗಿದ್ದು, ಸಾರ್ವಜನಿಕರು ನಗರ ಶುಚಿಯಾಗಿಟ್ಟುಕೊಳ್ಳಲು ಸಹಕರಿಸಬೇಕು. ಯಾವುದೇ ಕಾರಣಕ್ಕೂ ಕನ್ಸರ್ವೆನ್ಸಿಗಳಲ್ಲಿ ಕಸ ಹಾಕಬಾರದು ಎಂದರು.
ಕಸ ವಿಲೇವಾರಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ದೂರು ಬಂದಲ್ಲಿ ತಕ್ಷಣವೇ ಸ್ಪಂದಿಸಲಾಗುವುದು ಎಂದ ಜಿಲ್ಲಾಧಿಕಾರಿಗಳು, ಕಸ ಪಡೆಯುವವರಿಂದ ತೊಂದರೆಯಾಗಿದ್ದಲ್ಲಿ ತಕ್ಷಣವೇ ಅವರನ್ನು ಬದಲಾಯಿಸಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.