ಮದ್ಯ ಸೇವಿಸಿದ್ದ ಪೊಲೀಸ್ ಪೇದೆ ಸಾವು
ದಾವಣಗೆರೆ: ಅತಿಯಾದ ಮದ್ಯಸೇವಿಸಿದ್ದ ಪೇದೆಯೊಬ್ಬ ಸಾವನ್ನಪ್ಪಿರುವ ಘಟನೆ ನಗರದ ಸಿದ್ದೇಶ್ವರ ಮಿಲ್ನ ಜಾಗದಲ್ಲಿ ಗುರುವಾರ ಸಂಜೆ ವರದಿಯಾಗಿದೆ. ಜಗಳೂರು ತಾ. ಬಿಳಿಚೋಡು ಪೊಲೀಸ್ ಠಾಣೆಯ ಪೇದೆ ರವಿ(37 ವರ್ಷ) ಮೃತ ವ್ಯಕ್ತಿ. ಅತಿಯಾದ ಮದ್ಯ ಸೇವನೆಯೇ ಪೇದೆ ರವಿ ಸಾವಿಗೆ ಕಾರಣವೆನ್ನಲಾಗಿದೆ. ಅತಿಯಾದ ಮದ್ಯವ್ಯಸನಿಯಾಗಿದ್ದ ರವಿ ಕಳೆದ 8 ವರ್ಷಗಳಿಂದಲೂ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು ಎಂದು ಮೂಲಗಳು ತಿಳಿಸಿದೆ. ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮ ಬೀಟೆ ವಶ
ಚನ್ನಗಿರಿ: ಚನ್ನಗಿರಿ ವಲಯ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿನ ಕಲ್ಲಾಪುರದ ದ್ಯಾಮಣ್ಣನ ಕೆರೆಯ ಬಳಿಯ ಕಾಡಿನಲ್ಲಿ ಬೀಟೆ ಮರಗಳನ್ನು ಸಾಗಿಸುತ್ತಿದ್ದಾಗ ರಾತ್ರಿ ಗಸ್ತಿನಲ್ಲಿದ್ದ ಅರಣ್ಯ ಇಲಾಖೆಯವರು ದಾಳಿ ನಡೆಸಿ ವಾಹನ ಸಹಿತ ವಪಡಿಸಿಕೊಂಡಿದ್ದು, ಕಳ್ಳರು ಪರಾರಿಯಾದ ಘಟನೆ ಬುಧವಾರ ಮಧ್ಯರಾತ್ರಿ ನಡೆದಿದೆ.
ಉಪವಲಯ ಅರಣ್ಯಾಧಿಕಾರಿ ಬಿ. ಸುರೇಂದ್ರ, ಅರಣ್ಯಾಧಿಕಾರಿ ಸೋಮಲಿಂಗ ಕುಂಬಾರ್ ಮತ್ತು ಸಿಬ್ಬಂದಿ ರಾತ್ರಿ ಗಸ್ತು ನಡೆಸುತ್ತಿದ್ದಾಗ ಮರಗಳ್ಳರು ವಾಹನದಲ್ಲಿ ಬೀಟೆ ಮರಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಆಗ ಅರಣ್ಯ ಇಲಾಖೆಯವರು ಬೆನ್ನಟ್ಟಿದ್ದನ್ನು ಗಮನಿಸಿ, ಮರ ತುಂಬಿದ್ದ ವಾಹನವನ್ನು ಅಲ್ಲಿಯೇ ಬಿಟ್ಟು ಪರಾರಿಯಾದರು ಎಂದು ಅರಣ್ಯಾಧಿಕಾರಿ ಕುಂಬಾರ್ ತಿಳಿಸಿದ್ದಾರೆ.
ಬೀಟೆ ಮರ ಮತ್ತು ವಾಹನವನ್ನು ಅರಣ್ಯ ಅಧಿಕಾರಿಗಳು ವಶ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಕ್ರಮ ಸ್ಪಿರಿಟ್ ವಶ: ಒಬ್ಬ ಬಂಧನ
ದಾವಣಗೆರೆ: ಅಕ್ರಮವಾಗಿ ಸ್ಪಿರಿಟ್ ಸಂಗ್ರಹಿಸಿಕೊಂಡು, ಅದಕ್ಕೆ ಮದ್ಯ ಮಿಶ್ರಣ ಮಾಡಿ ಸಾರ್ವಜನಿಕರಿಗೆ ನಕಲಿ ಮದ್ಯ ಮಾರಾಟ ಮಾಡುತ್ತಿದ್ದ ಹೊನ್ನಾಳಿ ತಾಲೂಕು ನ್ಯಾಮತಿ ಗ್ರಾಮದ ಹೊಟೆಲೊಂದರ ಮೇಲೆ ದಾಳಿ ನಡೆಸಿ, ರು. 3,900 ಮೌಲ್ಯದ ಸ್ಪಿರಿಟ್ ತುಂಬಿದ 10 ಬಾಟಲಿ, 9 ಮದ್ಯದ ಬಾಟಲಿಗಳನ್ನು ಜಪ್ತು ಮಾಡಿ, ಆರೋಪಿಯನ್ನು ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು ಬಂಧಿಸಿದ್ದಾರೆ.
ನ್ಯಾಮತಿ ಗ್ರಾಮದ ಪ್ರಿಯದರ್ಶಿನಿ ಹೊಟೋಲ್ನಲ್ಲಿ ಸ್ಪಿರಿಟ್ ಬಳಸಿಕೊಂಡು ಅಕ್ರಮ ಮದ್ಯ ತಯಾರಿಸಿ, ಸಾರ್ವಜನಿಕರಿಗೆ ನೀಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಆಧರಿಸಿ ಡಿಸಿಐಬಿ ಇನ್ಸಪೆಕ್ಟರ್ ಅರ್ಜುಮನ್ ಬಾನು ಹಾಗೂ ಸಿಬ್ಬಂದಿ ದಾಳಿ ನಡೆಸಿದರು. ಅಕ್ರಮ ಸ್ಪಿರಿಟ್ ಸಂಗ್ರಹಿಸಿ, ಅಕ್ರಮ ಮದ್ಯ ತಯಾರಿಸಿ ಮಾರಾಟ ಮಾಡುತ್ತಿದ್ದ ಹೊಟೆಲ್ನ ರಂಗನಾಥ(38 ವರ್ಷ)ನನ್ನು ಬಂಧಿಸಲಾಯಿತು.
ಡಿಸಿಐಬಿ ಸಿಬ್ಬಂದಿ ತಿಪ್ಪೇಸ್ವಾಮಿ, ಮಸ್ತಾನ್, ಧನರಾಜ, ಪುಟ್ಟಸ್ವಾಮಿ, ಆಂಜನೇಯ, ಮಜೀದ್, ಹನುಮಂತಪ್ಪ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.