ಆಧಾರ್ ಕೇಂದ್ರ ಆರಂಭಿಸಲು ಆಗ್ರಹ
ಕ.ಪ್ರ.ವಾರ್ತೆ , ಬಾಳೆಹೊನ್ನೂರು , ಆ.9
ಸಮೀಪದ ಜಯಪುರ ಪಟ್ಟಣದಲ್ಲಿ ಆಧಾರ್ ನೋಂದಣಿ ಕೇಂದ್ರವನ್ನು ಆರಂಭಿಸುವಂತೆ ಒತ್ತಾಯಿಸಿ ಕರ್ನಾಟಕ ಎಸ್ಟೇಟ್ ಲೇಬರ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಪಿಪಿಎಸ್ ಮಣಿ ಅವರು ಜಿಲ್ಲಾಡಳಿ, ಸಂಸದರು, ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ತಾಲೂಕಿನ ನಕ್ಸಲ್ ಪೀಡಿತ ಪ್ರದೇಶದ ವ್ಯಾಪ್ತಿಯ ಮೇಗುಂದಾ ಹೋಬಳಿ ಸುಮಾರು 24 ಗ್ರಾಮಗಳನ್ನು ಹೊಂದಿದೆ. ಪಟ್ಟಣದ ಸುತ್ತಮುತ್ತ ಬೃಹತ್ ಕಾಫಿ ಮತ್ತು ಟೀ ತೋಟಗಳಿದ್ದು ಸಾವಿರಾರು ಕಾರ್ಮಿಕರು ವಾಸವಾಗಿದ್ದಾರೆ. ಅಲ್ಲದೇ ಸಾವಿರಾರು ವಿದ್ಯಾರ್ಥಿಗಳು ಪಟ್ಟಣದಲ್ಲಿ ವ್ಯಾಸಂಗ ಮಾಡುತ್ತಿದ್ದು, ವಿದ್ಯಾರ್ಥಿ ವೇತನ ಪಡೆಯಲು ಮತ್ತು ತೋಟ ಕಾರ್ಮಿಕರಿಗೆ ಭವಿಷ್ಯನಿಧಿ ಮತ್ತು ಪಿಂಚಣಿ ಹಣ ಪಡೆಯಲು ಆಧಾರ್ ಕಾರ್ಡ್ ಹೊಂದಿರುವುದು ಅಗತ್ಯವಾಗಿದೆ.
ಇದೀಗ ತಾಲೂಕು ಕೇಂದ್ರ ಕೊಪ್ಪದಲ್ಲಿ ಆಧಾರ್ ನೋಂದಣಿ ಕೇಂದ್ರ ಇದ್ದು, ದೂರದ ಬಸರೀಕಟ್ಟೆ, ಸೀಗೋಡಿನಿಂದ 40-50 ಕಿ.ಮೀ. ದೂರದ ಅಲ್ಲಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೂಡಲೇ ಜಯಪುರದಲ್ಲಿ ಆಧಾರ್ ನೋಂದಣಿ ಕೇಂದ್ರವನ್ನು ಆರಂಭಿಸುವಂತೆ ಒತ್ತಾಯಿಸಿದ್ದಾರೆ.
ಮುಂದಿನ ಹದಿನೈದು ದಿನಗಳ ಒಳಗಾಗಿ ಜಯಪುರ ಪಟ್ಟಣದಲ್ಲಿ ಆಧಾರ್ ನೋಂದಣಿ ಕೇಂದ್ರ ಆರಂಭಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಚಿಕ್ಕಮಗಳೂರು ಅಪರ ಜಿಲ್ಲಾಧಿಕಾರಿ ಬಾಲಚಂದ್ರ ಅವರು ಭರವಸೆ ನೀಡಿದ್ದಾರೆ ಎಂದು ಜಿ.ಪಂ. ಮಾಜಿ ಅಧ್ಯಕ್ಷ ಎಚ್.ಎಂ. ಸತೀಶ್ ತಿಳಿಸಿದ್ದಾರೆ.
ಆಧಾರ್ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ಬುಧವಾರ ಜಿಲ್ಲಾಧಿಕರಿಗಳಿಗೆ ಮನವಿ ಸಲ್ಲಿಸಿದಾಗ ಈ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.