ನಿಷೇಧವಿದ್ದರೂ ಗುಟ್ಕಾ ಮಾರಾಟ: ವಿಷಾದ
ಕ.ಪ್ರ.ವಾರ್ತೆ , ಶಿವಮೊಗ್ಗ , ಆ.10
ತಂಬಾಕಿನ ಚಟದಿಂದ ಕ್ಯಾನ್ಸರ್ಗೆ ತುತ್ತಾಗಿ ಧ್ವನಿಪೆಟ್ಟಿಗೆಯನ್ನೆ ಕಳೆದುಕೊಂಡಿದ್ದೇನೆ. ಇದೀಗ ಕೃತಕ ಧ್ವನಿಪೆಟ್ಟಿಗೆ ನೆರವು ಪಡೆಯುತ್ತಿದ್ದೇನೆ. ಇಂತಹ ಸ್ಥಿತಿ ಬೇರೆಯವರು ಅನುಭವಿಸುವುದು ಬೇಡ. ತಂಬಾಕು ಮತ್ತಿತರ ಚಟಗಳಿಂದ ಯುವಜನತೆ ದೂರವಿರಬೇಕು ಎಂದು ಕ್ಯಾನ್ಸರ್ನಿಂದ ಬಳಲುತ್ತಿರುವ ನಗರದ ದುರ್ಗಯ್ಯ ಮನವಿ ಮಾಡಿದರು.
ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್(ಐಪಿಎಟ್)ತಂಬಾಕು ಉತ್ಪನ್ನಗಳಿಂದ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಾಗಾರದಲ್ಲಿ ಅವರು, ತಮ್ಮ ಜೀವನದಲ್ಲಿ ತಂಬಾಕು ಸೇವನೆಗೆ ಬಲಿಯಾಗಿ ಆದಂತಹ ಅನುಭವಗಳನ್ನು ಹಂಚಿಕೊಂಡರು.
ತಂಬಾಕು ಸೇವನೆ ಶೋಕಿ: ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಬಿ. ಪ್ರಸನ್ನ ಕುಮಾರ್, ತಂಬಾಕು ಸೇವನೆ ಎಂಬುದು ಇಂದಿನ ಶೋಕಿಯಾಗಿದೆ. ನಾಳಿನ ಚಟವಾಗಿ ಜೀವವನ್ನೇ ತೆಗೆಯುತ್ತದೆ ಎಂದರು.
ಇಂತಹ ಜೀವಹರಣ ಉತ್ಪನ್ನದಿಂದ ಎಲ್ಲರೂ ದೂರ ಇರಬೇಕು. ತಂಬಾಕು ಮತ್ತು ಅದರಂತಹ ಉತ್ಪನ್ನಗಳ ಸೇವನೆಯಿಂದ ಕೇವಲ ಒಬ್ಬ ವ್ಯಕ್ತಿಗೆ ಕ್ಯಾನ್ಸರ್ ಬಂದು ಆತ ಸಾಯುವುದಿಲ್ಲ. ಇಡೀ ಕುಟುಂಬವೇ ಜೀವಂತ ಇದ್ದರೂ ಸತ್ತಂತೆ. ಏಕೆಂದರೆ ಕ್ಯಾನ್ಸರ್ ಪೀಡಿತ ವ್ಯಕ್ತಿಗಾಗಿ ಇಡೀ ಕುಟುಂಬ ತಮ್ಮ ಸರ್ವಸ್ವ ತ್ಯಾಗ ಮಾಡಬೇಕಾಗುತ್ತದೆ ಎಂದ ಅವರು, ರಾಜ್ಯದಲ್ಲಿ ಗುಟ್ಕಾ ನೀಷೇಧ ಜಾರಿಯಲ್ಲಿದ್ದರೂ ಕಂಪನಿಗಳು ಪರ್ಯಾಯ ಮಾರ್ಗ ಕಂಡುಹಿಡಿದು ಗುಟ್ಕಾ ಮಾರಾಟ ಮಾಡುತ್ತಿರುವುದು ವಿಷಾದನೀಯ ಎಂದರು.
8ಸೆಕೆಂಡ್ಗೆ 1 ಸಾವು: ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯ ವೈದ್ಯ ಡಾ.ಯು.ಎಸ್. ವಿಶಾಲ್ ರಾವ್, ಇತ್ತೀಚಿನ ಗ್ಲೋಬಲ್ ಅಡಲ್ಟ್ ಟೊಬ್ಯಾಕೋ ಸರ್ವೇ ಪ್ರಕಾರ 15 ವಯಸ್ಸಿಗಿಂತ ಮೇಲ್ಪಟ್ಟ ಶೇ. 40ರಷ್ಟು ಪುರುಷರು ಹಾಗೂ ಶೇ 16ರಷ್ಟು ಮಹಿಳೆಯರು ತಂಬಾಕು ಸೇವನೆಯಲ್ಲಿ ತೊಡಗಿದ್ದಾರೆ. ಶೇ. 37ರಷ್ಟು ಮಂದಿ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಧೂಮಪಾನದ ಹೊಗೆ ಸೇವಿಸುತ್ತಿದ್ದಾರೆ.
ಅಲ್ಲದೆ 13 ರಿಂದ 15 ವರ್ಷದೊಳಗಿನ ಮಕ್ಕಳಲ್ಲಿ ಶೇಕಡ 8ರಷ್ಟು ಬಾಲಕರು ಹಾಗೂ ಶೇಕಡ 2ರಷ್ಟು ಬಾಲಕಿಯರು ತಂಬಾಕು ಬಳಕೆ ಮಾಡುತ್ತಿದ್ದಾರೆ. ಶೇಕಡ 47ರಷ್ಟು ಮಕ್ಕಳು ಮನೆಯಿಂದ ಹೊರಗೆ ನಡೆಯುವ ಧೂಮಪಾನದಿಂದ ಹೊಗೆ ಸೇವನೆ ಮಾಡುತ್ತಿದ್ದಾರೆ. ಇದರಿಂದಾಗುವ ಪರಿಣಾಮಗಳು ಅಪಾರ. ತಂಬಾಕು ಬಳಕೆಯಿಂದ ಪ್ರತಿ 8ಸೆಕೆಂಡ್ಗೆ ಒಬ್ಬ ವ್ಯಕ್ತಿ ಸಾವನ್ನಪ್ಪುತ್ತಿದ್ದಾನೆ ಎಂದು ಕಳವಳ ವ್ಯಕ್ತಪಡಿಸಿದರು.
ಐಪಿಎಚ್ ಸದಸ್ಯ ಡಾ. ಉಪೇಂದ್ರ ಭೋಜಾನಿ, ಮಾನಸಿಕ ಆರೋಗ್ಯ ಕಾರ್ಯಪಡೆ ಅಧಕ್ಷ ಡಾ. ಅಶೋಕ ಪೈ ಮಾತನಾಡಿದರು.