ಬಂಗಾರಪ್ಪ ಕುರಿತು ಮಾತನಾಡುವ ನೈತಿಕ ಹಕ್ಕಿಲ್ಲ
ಶಿವಮೊಗ್ಗ: ಸಂಸದ ಬಿ.ವೈ.ರಾಘವೇಂದ್ರಗೆ ಎಸ್. ಬಂಗಾರಪ್ಪ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಸೊರಬ ಶಾಸಕ ಮಧು ಬಂಗಾರಪ್ಪ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಘವೇಂದ್ರ ತಮ್ಮ ತಂದೆ ಬಿ.ಎಸ್. ಯಡಿಯೂರಪ್ಪ ಅವರ ಭ್ರಷ್ಟಾಚಾರದ ಹಣದಿಂದ ಸಂಸದರಾದವರು. ಅವರಿಗೆ ಬಂಗಾರಪ್ಪ ಅವರ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಪ್ರತಿಪಾದಿಸಿದರು.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಘವೇಂದ್ರ ಸ್ಪರ್ಧಿಸಲಿ, ಅವರನ್ನು ಮತ್ತೆ ಮುನ್ಸಿಪಾಲಿಟಿಗೆ ಕಳುಹಿಸುತ್ತೇವೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಬಂಗಾರಪ್ಪ ನಿರಪರಾಧಿ: ಬಂಗಾರಪ್ಪ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿ, ಅವರ ರಾಜಕೀಯ ಶಕ್ತಿ ಹಾಳು ಮಾಡಿದ ಕಾಂಗ್ರೆಸ್ನ ಕುತಂತ್ರ ಇದೀಗ ಬಯಲಾಗಿದೆ. ಬಂಗಾರಪ್ಪ ನಿರಪರಾಧಿ ಎಂಬುದನ್ನು ಸಿಬಿಐ ವಿಶೇಷ ನ್ಯಾಯಾಲಯ ಘೋಷಿಸಿದ್ದು, ನ್ಯಾಯಾಲಯ ತೀರ್ಪಿನಲ್ಲಿ ಬಂಗಾರಪ್ಪ ವಿರುದ್ಧ ಅಂದಿನ ಪ್ರಧಾನಮಂತ್ರಿ ಪಿ.ವಿ. ನರಸಿಂಹರಾವ್, ವೀರಪ್ಪ ಮೊಯ್ಲಿ, ಕೇಂದ್ರದ ಮಾಜಿ ಸಚಿವೆ ಮಾರ್ಗರೇಟ್ ಆಳ್ವ ಅವರು ರಾಜಕೀಯ ಸಂಚು ನಡೆಸಿದ್ದರು ಎಂಬುದನ್ನು ಸ್ಪಷ್ಟ ಪಡಿಸಿದೆ. ಇದನ್ನೇ ಮುಂದಿಟ್ಟುಕೊಂಡು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸಲಾಗುವುದು ಎಂದರು.
ಮನೆ ಮುರುಕರಿಗೆ ಕೈ ಅಭಯ: ಇಂತಹ ಸಂಚು ನಡೆಸಿದ ಮಾರ್ಗರೇಟ್ ಆಳ್ವ ರಾಜ್ಯಪಾಲರಾಗಿದ್ದಾರೆ. ವೀರಪ್ಪಮೊಯ್ಲಿ ಕೇಂದ್ರ ಸಚಿವರಾಗಿದ್ದಾರೆ. ಇಂತಹ ಮನೆಮುರುಕರಿಗೆ ಕಾಂಗ್ರೆಸ್ ಅಧಿಕಾರ ನೀಡಿರುವುದಕ್ಕೆ ನಾಚಿಕೆ ಆಗಬೇಕು ಎಂದು ಟೀಕಿಸಿದರು. ಜಿಲ್ಲೆಯಲ್ಲಿ ಜೆಡಿಎಸ್ ಪ್ರಾಬಲ್ಯ ಹೊಂದಿದ್ದು, ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಲಿದ್ದಾರೆ. ಪಕ್ಷದ ಅಭ್ಯರ್ಥಿ ಯಾರು ಎಂಬುದು ಇನ್ನೂ ತೀರ್ಮಾನ ಮಾಡಿಲ್ಲ. ಗೆಲ್ಲುವಂತ ಅಭ್ಯರ್ಥಿಯನ್ನೇ ಕಣ್ಣಕ್ಕಿಳಿಸಲಾಗುವುದು. ಈ ನಿಟ್ಟಿನಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಹೊತ್ತು ನೀಡಲಿದೆ ಎಂದರು. ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದ ಫಲವಾಗಿ ಶಿಕಾರಿಪುರಕ್ಕೆ ವರ್ಗಾವಾಗಿದ್ದ ಜಿಲ್ಲಾ ಸರ್ಕಾರಿ ಆಸ್ಪತ್ರೆ ಪುನ: ಜಿಲ್ಲಾ ಕೇಂದ್ರಕ್ಕೆ ವರ್ಗಾಯಿಸಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದರು.
ಸೆ.2ರಂದು ಜೆಡಿಎಸ್ ಸಭೆ: ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಮಾತನಾಡಿ, ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಸೆ.2ರಂದು ಶಿವಮೊಗ್ಗದಲ್ಲಿ ಜಾತ್ಯಾತೀತ ಜನತಾ ದಳದ ಪದಾಧಿಕಾರಿಗಳ ಸಭೆ ನಡೆಯಲಿದ್ದು, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ನಗರಕ್ಕೆ ಆಗಮಿಸಲಿದ್ದಾರೆ. ಜಿಲ್ಲೆಯಲ್ಲಿ ಒಂದು ಸ್ಥಾನದಲ್ಲಿದ್ದ ಪಕ್ಷ ಇದೀಗ ಮೂರು ಸ್ಥಾನ ಪಡೆದುಕೊಂಡಿದೆ. 2.70 ಲಕ್ಷ ಮತದಾರರು ಮತ ನೀಡಿದ್ದಾರೆ. ಪಕ್ಷ ಹೆಚ್ಚು ಸಂಘಟನ್ಮಾಕವಾಗಿ ಬೆಳೆದಿದೆ ಎಂದು ತಿಳಿಸಿದರು.