ಶಾಸಕರಿಗೆ ಸನ್ಮಾನ, ಅಧ್ಯಕ್ಷರ ವಾಪಸ್
ಕ.ಪ್ರ.ವಾರ್ತೆ, ಶಿವಮೊಗ್ಗ, ಆ.10
ವಿಧಾನಸಭೆ ಚುನಾವಣೆ ನಂತರ ಮಂಕು ಕವಿದಂತಾಗಿದ್ದ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ಶನಿವಾರ ಸಂಭ್ರಮ ಮನೆ ಮಾಡಿತ್ತು. ಇದೇ ಮೊದಲ ಬಾರಿಗೆ ಜಿಲ್ಲೆಯಿಂದ ಆಯ್ಕೆಯಾಗಿರುವ ಪಕ್ಷದ ಮೂವರು ಶಾಸಕರಾದ ಅಪ್ಪಾಜಿ ಗೌಡ, ಶಾರದಾ ಪೂರ್ಯಾನಾಯ್ಕ್, ಮಧು ಬಂಗಾರಪ್ಪ ಅವರಿಗೆ ಸನ್ಮಾನಿಸುವ ನೆಪದಲ್ಲಿ ಬಹುತೇಕ ಎಲ್ಲಾ ಪದಾಧಿಕಾರಿಗಳು ನೆರೆದಿದ್ದರು. ಜತೆಗೆ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಎಂ. ಶ್ರೀಕಾಂತ್ ಅವರ ಕಂಬ್ಯಾಕ್ ಕಾರ್ಯಕ್ರಮವೂ ಆಗಿತ್ತು.
ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದ ಎಂ. ಶ್ರೀಕಾಂತ್ ಅವರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಲ್ಲದೇ ಬಹುತೇಕ ಪಕ್ಷದ ಕಚೇರಿಯತ್ತ ತಲೆ ಹಾಕಿರಲಿಲ್ಲ. ಪಕ್ಷದ ವರಿಷ್ಠರು ಮನವೊಲಿಸಿದ ನಂತರ ರಾಜಿನಾಮೆ ಹಿಂಪಡೆದು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಒಪ್ಪಿಕೊಂಡಿದ್ದರು. ಈ ವಿದ್ಯಮಾನಗಳ ನಂತರ ಪಕ್ಷದ ಕಚೇರಿ ಇರುವ ಗಾಂಧಿ ಮಂದಿರದಲ್ಲಿ ನಡೆದ ಮೊದಲ ಕಾರ್ಯಕ್ರಮವಿದು.
ನೂತನ ಶಾಸಕರು ಹಾಗೂ ಶಿಕಾರಿಪುರ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿದ್ದ ಬಳಿಗಾರ್ ಅವರಿಗೆ ಪಕ್ಷ ಸನ್ಮಾನಿಸಿದ ಸಂದರ್ಭದಲ್ಲಿ ಸಂಘಸಂಸ್ಥೆಗಳ ಪದಾಧಿಕಾರಿಗಳು ಶ್ರೀಕಾಂತ್ ಅವರನ್ನು ಸನ್ಮಾನಿಸಿದರು.
ಸಂಘಟಿಸೋಣ: ಸಭೆಯಲ್ಲಿ ಮಾತನಾಡಿದ ಮೂವರು ಶಾಸಕರೂ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷವನ್ನು ಇನ್ನಷ್ಟು ಸಂಘಟಿಸುವ ಕಡೆ ಒತ್ತು ನೀಡಿದರು. ಭದ್ರಾವತಿ ಶಾಸಕ ಅಪ್ಪಾಜಿಗೌಡ, ಇವತ್ತು ಜನರು ಪ್ರಣಾಳಿಕೆ ಮೇಲೆ ಓಟು ಕೊಡುವಷ್ಟು ಪ್ರಬುದ್ಧರಾಗಿಲ್ಲ. ಜನರ ಜತೆಗೆ ಎಷ್ಟು ಸಂಪರ್ಕ ಹೊಂದಿದ್ದೇವೆ, ಎಷ್ಟು ನೆರವಾಗಿದ್ದೇವೆ ಎಂಬುದೇ ಮುಖ್ಯ. ನಾವ್ಯಾರೂ ಸಹ ನಮ್ಮ ಕ್ಷೇತ್ರಕ್ಕೆ ಮಾತ್ರ ಶಾಸಕರು ಎಂದು ತಿಳಿಯಬೇಡಿ. ಜಿಲ್ಲೆಯ ಯಾವುದೇ ಕಾರ್ಯಕರ್ತರಿಗೆ, ಕಷ್ಟದಲ್ಲಿರುವವರಿಗೆ ನೆರವಾಗಲು ಬದ್ಧ ಎಂದರು.
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯಾನಾಯ್ಕ್, ಸೊರಬ ಶಾಸಕ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಶಿಕಾರಿಪುರ ಅಭ್ಯರ್ಥಿಯಾಗಿದ್ದ ಬಳಿಗಾರ್ ಮಾತನಾಡಿದರು.
ಎಂ. ಶ್ರೀಕಾಂತ್ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಸಿ.ಜಿ. ಮಾದಪ್ಪ, ಮುಖಂಡ ರಾಮಕೃಷ್ಣ, ತ್ಯಾಗರಾಜ್, ನಗರಸಭೆ ಸದಸ್ಯ ನಾಗರಾಜ್ ಕಂಕಾರಿ, ಪಾಲಾಕ್ಷಿ, ಕೇಬಲ್ ಬಾಬು ಸೇರಿದಂತೆ ಹಲವು ಮುಖಂಡರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.
ಜತೆಗಿದ್ದವರಿಂದಲೇ ಬೆನ್ನಿಗೆ ಚೂರಿ
ಜತೆಗಿದ್ದವರೇ ಕೈಕೊಟ್ಟಿದ್ದರಿಂದ ಶಿವಮೊಗ್ಗ ಕ್ಷೇತ್ರದಲ್ಲಿ ಶ್ರೀಕಾಂತ್ ಅವರ ಸೋಲಾಯಿತು ಎಂದು ಶನಿವಾರ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬಹುತೇಕ ಭಾಷಣಕಾರರು ಈ ವಿಷಯ ಪ್ರಸ್ತಾಪಿಸಿದರು.
ಅಪ್ಪಾಜಿಗೌಡ, ಸ್ನೇಹಿತರೇ ಕೈಕೊಟ್ಟಿದ್ದರಿಂದ ಶ್ರೀಕಾಂತ್ ಅವರಿಗೆ ಸೋಲಾಯಿತು. ಚೂರಿ ಬೆನ್ನಿಗೆ ಹಾಕಿದರೇನು, ಮುಂದಿನಿಂದ ಹಾಕಿದರೇನು ಚೂರಿ ಚೂರಿಯೇ ಎಂದು ಮಾರ್ಮಿಕವಾಗಿ ಹೇಳಿದರು. ಪ್ರೀತಿಯಿಂದ ನೋಡಿಕೊಂಡವರೇ ಮೋಸ ಮಾಡಿದರೆ ಅವರನ್ನು ಕೆಟ್ಟ ಮನಸ್ಸಿನವರು ಎಂದು ಹೇಳಬೇಕೇ ಹೊರತು ಬೇರೇನೂ ಹೇಳಲು ಸಾಧ್ಯ ಎಂದು ಪ್ರಶ್ನಿಸಿದರು.ಶಾಸಕಿ ಶಾರದಾ ಪೂರ್ಯಾನಾಯ್ಕ್, ಜತೆಗಿದ್ದವರೇ ಕೈಕೊಟ್ಟಿದ್ದರಿಂದ ನೋವಾಗುವುದು ಸಹಜ. ಅದನ್ನು ಮೀರಿ ಪಕ್ಷ ಸಂಘಟನೆಗೆ ಮುಂದಾಗಿರುವುದು ಒಳ್ಳೆಯದೇ ಎಂದರು.
ಅಧ್ಯಕ್ಷ ಭಾಷಣದಲ್ಲಿ ಎಂ. ಶ್ರೀಕಾಂತ್, ಚುನಾವಣೆಯ ಆರಂಭದಲ್ಲಿಯೇ ಕೆಲವರು ಗೊಂದಲ ಸೃಷ್ಟಿಸಿದರು. ಅದನ್ನು ಕೊನೆಯವರೆಗೂ ಸರಿಮಾಡಲು ಆಗಲಿಲ್ಲ. ಹಿನ್ನೆಲೆಯಲ್ಲಿ ಹಲವು ವ್ಯತ್ಯಾಸಗಳು ಆದವು. ಅದಕ್ಕಾಗಿ ನೋವಾಗಿತ್ತು. ರಾಜಿನಾಮೆ ನೀಡಿದ್ದೆ. ವರಿಷ್ಠರು, ಎಲ್ಲಾ ಶಾಸಕರು ಒತ್ತಾಯ ಮಾಡಿದ್ದರಿಂದ ವಾಪಸ್ ಪಡೆದಿದ್ದೇನೆ ಎಂದು ಸ್ಪಷ್ಟೀಕರಿಸಿದರು.