ಸಮೂಹ ಶ್ರವ್ಯ ಸಾಧನ ವಿತರಣೆ
ಕ.ಪ್ರ.ವಾರ್ತೆ , ಶಿವಮೊಗ್ಗ , ಆ.10
ಶತಮಾನೋತ್ಸವ ಸಂಭ್ರಮದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸಾಮಾಜಿಕ ಜವಾಬ್ದಾರಿ ಅಂಗವಾಗಿ ಬಸವೇಶ್ವರ ನಗರದ ತರಂಗ ಕಿವುಡು ಶಾಲೆ ಮಕ್ಕಳ ಉಪಯೋಗಕ್ಕಾಗಿ ಶನಿವಾರ ಸಮೂಹ ಶ್ರವ್ಯ ಸಾಧನಾ ಹಾಗೂ ಇತರೆ ಉಪಯೋಗಿ ಸಲಕರಣೆಗಳನ್ನು ವಿತರಿಸಿತು.
ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಶರದ್ ಶರ್ಮ, ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್. ಎಂ. ವಿಶ್ವೇಶ್ವರಯ್ಯ ಅವರ ಮುತ್ಸದ್ಧಿತನ ಹಾಗೂ ಮಾರ್ಗದರ್ಶನವನ್ನು ಸ್ಮರಿಸುತ್ತಿದ್ದು, ಸಾಮಾಜಿಕ ಕಳಕಳಿ ಇರುವ ಅನೇಕ ಜವಾಬ್ದಾರಿಯುತ ಕಾರ್ಯಕ್ರಮವನ್ನು ಎಸ್ಬಿಐನಿಂದ ಹಮ್ಮಿಕೊಳ್ಳಲಾಗಿದೆ ಎಂದರು.
ಕುಡಿವ ನೀರು ಘಟಕ: ಎಸ್ಬಿಎಂ ನೌಕರರ ಸಂಘದ ಅಧ್ಯಕ್ಷ ಹಿರಿಯಣ್ಣಯ್ಯ, ಸಾಮಾಜಿಕ ಕಳಕಳಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಹಿಂದುಳಿದ ಪ್ರದೇಶದ ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್ ವಿತರಿಸಿ, ಬ್ಯಾಟರಿ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಶಾಲೆಗಳಿಗೆ ಕುಡಿಯುವ ನೀರಿನ ಘಟಕಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.
ತ್ಯಾವರೆಕೊಪ್ಪ ಹುಲಿಸಿಂಹಧಾಮದಲ್ಲಿ ಪ್ರಾಣಿಯೊಂದನ್ನು ದತ್ತು ಪಡೆಯಲಾಗುವುದು. ಶಾಲಾಮಕ್ಕಳಿಗೆ ಪಠ್ಯಪರಿಕರಗಳ ಜೊತೆ ಆರೋಗ್ಯ ಕಾಳಜಿಯಿಂದ ಹಲವು ಸಲಕರಣೆ ವಿತರಿಸಲಾಗಿದೆ ಎಂದು ತಿಳಿಸಿದರು.
ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಸ್. ಬಂಗಾರರಾಜು, ಹುಬ್ಬಳಿ ವಲಯದ ಉಪ ಪ್ರಧಾನ ವ್ಯವಸ್ಥಾಪಕ ವಿ.ಪಿ. ರವೀಂದ್ರಕುಮಾರ್, ಪ್ರಾದೇಶಿಕ ಕಚೇರಿ ಸಹಾಯಕ ಪ್ರಧಾನ ವ್ಯವಸ್ಥಾಪಕ ದಿನೇಶ ಎ. ಪಾಟೀಲ, ಎಜಿಎಂ ವೆಂಕಟರಮಣ ಹೆಗ್ಡೆ, ಕೃಷ್ಣಮೂರ್ತಿ, ಶಿವಭದ್ರ ಟ್ರಸ್ಟ್ ಅಧ್ಯಕ್ಷ ಡಾ. ಸುರೇಶ್ ಇಸ್ಲೂರ್, ಭಾಸ್ಕರ್ ಜಿ. ಕಾಮತ್, ಮಂಜುಳಾದೇವಿ, ಮದನ್ ಲಾಲ್, ಎಸ್ಬಿಎಂ ನೌಕರರ ಸಂಘದ ಕಾರ್ಯದರ್ಶಿ ಹೆಚ್.ಸಿ. ರವಿಕುಮಾರ್ ಮತ್ತಿತರರಿದ್ದರು.