ಹುಲಿ ಯೋಜನೆ ನೆಪದಲ್ಲಿ ರೈತರ ಮೇಲೆ ದಬ್ಬಾಳಿಕೆ ಸಲ್ಲ
ಕ.ಪ್ರ.ವಾರ್ತೆ , ಕಡೂರು , ಆ.10
ತಾಲೂಕಿನ ಎಮ್ಮೇದೊಡ್ಡಿ ಪ್ರದೇಶದ ಸರ್ವೆ ನಂ 70ರ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸರ್ವಾಧಿಕಾರಿಗಳಂತೆ ವರ್ತಿಸುವ ಮೂಲಕ ಅಮಾಯಕ ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಶಾಸಕ ವೈಎಸ್ವಿ ದತ್ತ ಆರೋಪಿಸಿದ್ದಾರೆ.
ತಾಲೂಕಿನ ಮದಗದಕೆರೆಗೆ ಪತ್ನಿ ನಿರ್ಮಲ ಮತ್ತು ಬೆಂಬಲಿಗರೊಂದಿಗೆ ಬಾಗಿನ ಅರ್ಪಿಸಿ ನಂತರ ಜನತೆ ಯನ್ನು ಉದ್ದೇಶಿಸಿ ಮಾತನಾಡಿದರು.
ರೈತರ ಮೇಲೆ ಕೈ ಮಾಡಲು ಅಧಿಕಾರವಿಲ್ಲ: ಅರಣ್ಯ ಇಲಾಖೆಯವರು ಹುಲಿ ಯೋಜನೆ ನೆಪದಲ್ಲಿ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಅರಣ್ಯ ಇಲಾಖೆಯವರಿಗೆ ರೈತರ ಮೇಲೆ ಕೈ ಮಾಡಲು ಅಧಿಕಾರ ನೀಡಿದವರು ಯಾರು ಎಂದು ಪ್ರಶ್ನಿಸಿ ಅಸಮಾಧಾನ ವ್ಯಕ್ತಪಡಿಸಿದರು.
ಕಂದಾಯ ಇಲಾಖೆಯಲ್ಲಿ ದಾಖಲಾಗಿಲ್ಲ: ಎಮ್ಮೇದೊಡ್ಡಿಯ ಈ ಪ್ರದೇಶವನ್ನು ತಹಸೀಲ್ದಾರರು ಅಮೃತ್ ಮಹಲ್ ಕಾವಲು ಪ್ರದೇಶ ಎಂದು ವರದಿ ನೀಡಿದ್ದಾರೆ. ಆದರೆ, ಕಂದಾಯ ಇಲಾಖೆಯ ದಾಖಲೆಗಳಲ್ಲಿ ಇದು ನಮೂದಾಗಿಲ್ಲ.
ಅರಣ್ಯ, ಅಮೃತ್ ಮಹಲ್ ಕಾವಲು, ಗೋಮಾಳ ಜಮೀನು ಒತ್ತುವರಿ ಮಾಡಿರುವ ಬಡ ಜನರ ಸಮಸ್ಯೆ ನಿವಾರಣೆಗೆ ಸರ್ಕಾರವು ಸಂಪುಟ ಉಪ ಸಮಿತಿ ರಚಿಸಲು ತೀರ್ಮಾನಿಸಿರುವುದು ಸ್ವಾಗತಾರ್ಹವಾಗಿದೆ. ಕಗ್ಗಂಟಾಗಿರುವ ಈ ಸಮಸ್ಯೆ ನಿವಾರಿಸಿ ಪರಿಹರಿಸಲು ಈ ಎಮ್ಮೇದೊಡ್ಡಿ ಪ್ರದೇಶದ ಸರ್ವೆ ನಡೆಸಿ ನಿಜವಾದ ವಾರಸುದಾರರಿಗೆ ಜಮೀನು ನೀಡುವಂತೆ ರಾಜ್ಯ ಉಚ್ಚ ನ್ಯಾಯಾಲಯ ನಿರ್ದೇಶನ ನೀಡಿದೆ ಎಂದು ಹೇಳಿದರು.
ಎಚ್ಡಿಕೆ ಕಾಲದಲ್ಲಿ ಚಾಲನೆ: ಹೆಬ್ಬೆ ತಿರುವು ಯೋಜನೆ ಕುರಿತು ಮಾತನಾಡಿದ ಶಾಸಕರು, ಹೆಬ್ಬೆ ಯೋಜನೆಯ ಮುಖ್ಯ ಉದ್ದೇಶವೇ ಮದಗದಕೆರೆಗೆ ನೀರು ಹರಿಸುವುದಾಗಿದ್ದು ತಾವು ವಿಧಾನಪರಿಷತ್ ಸದಸ್ಯರಾಗಿದ್ದಾಗ ಹೆಬ್ಬೆ ಯೋಜನೆ ವಿಚಾರ ಹಕ್ಕು ಚರ್ಚೆಯಾಗಿ ಅಂದಿನ ಸಿಎಂ ಕುಮಾರಸ್ವಾಮಿ ಎ ಸ್ಕೀಂ ನಲ್ಲಿ 1.05 ಟಿಎಂಸಿ ನೀರು ಮಂಜೂರು ಮಾಡಿದ್ದರು. ನಂತರ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿನೀರಿನ ಅಳವಡಿಕೆ ಮಾಡಿದರು ಎಂದು ದತ್ತ ತಿಳಿಸಿದರು.
ಜಾರಿ ಹಂತದಲ್ಲಿ ಯೋಜನೆ: ಈ ಯೋಜನೆ ಜಾರಿಗೆ ತಾವು ಪ್ರಯತ್ನಿಸಿದ ಹಿನ್ನೆಲೆಯಲ್ಲಿ ಯೋಜನೆ ಜಾರಿ ಹಂತದಲ್ಲಿದ್ದು ಇದೀಗ 145 ಕೋಟಿ ಈ ಯೋಜನೆಯನ್ನು ನೀರಾವರಿ ನಿಗಮ ಕೈಗೆತ್ತಿಕೊಳ್ಳುತ್ತಿದೆ ಎಂದರು.
ತಹಸೀಲ್ದಾರ್ ಎನ್.ಕೆ. ಶಾರದಾಂಬ, ಜಿಪಂ ಸದಸ್ಯ ಬಿ.ಪಿ. ನಾಗರಾಜ್, ಎಮ್ಮೇದೊಡ್ಡಿ ಗ್ರಾಪಂ ಅಧ್ಯಕ್ಷೆ ಚಂದ್ರಮ್ಮ ನಾಗರಾಜ್, ಜೆಡಿಎಸ್ ಮುಖಂಡರಾದ ಭಂಡಾರಿ ಶ್ರೀನಿವಾಸ್,
ಕೆ.ಹೆಚ್.ಲಕ್ಕಣ್ಣ, ಎಸ್.ರಮೇಶ್, ಜಿಗಣೇಹಳ್ಳಿ ನೀಲಕಂಠಪ್ಪ, ಸೋಮೇಶ್, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.