ನೌಕರರ ಸೇವೆಗೆ ಬದ್ಧ: ಷಡಕ್ಷರಿ
ಶಿವಮೊಗ್ಗ: ಚುನಾವಣೆಯಲ್ಲಿ ಮಾತ್ರ ಸ್ಪರ್ಧೆ, ನಂತರ ಎಲ್ಲರೂ ಒಂದೇ. ಮುಂದಿನ ದಿನಗಳಲ್ಲಿ ಒಗ್ಗಟ್ಟಾಗಿ ರಾಜ್ಯ ಸರ್ಕಾರಿ ನೌಕರರ ಸೇವೆಗೆ ಬದ್ಧರಾಗಿರುತ್ತೇವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗೆ ಮುಂಚೆ ನೀಡಿದ್ದ ಎಲ್ಲ ಭರವಸೆಗಳನ್ನೂ ಹಂತಹಂತವಾಗಿ ಈಡೇರಿಸುತ್ತೇವೆ ಎಂದರು.
ಪ್ರಮಾಣಿಕ ಪ್ರಯತ್ನ: ಸರ್ಕಾರಿ ನೌಕರರ ಭವನದ ಕೆಲಸ ಬಾಕಿ ಇದ್ದು, ಮುಗಿಸಬೇಕಿದೆ. ಸರ್ಕಾರಿ ನೌಕರರಿಗೆ ಕಡಿಮೆ ದರದಲ್ಲಿ ನಿವೇಶನ, ರೈಲು ನಿಲ್ದಾಣದ ಬಳಿ ಸುಸಜ್ಜಿತ ಕಲ್ಯಾಣ ಮಂಟಪ, ನೌಕರರಿಗೆ ಅಗತ್ಯ ತರಬೇತಿ, ಕೆಎಎಸ್ ಹಾಗೂ ಐಎಎಸ್ ಪರೀಕ್ಷೆಗೆ ತರಬೇತಿ ಸೇರಿದಂತೆ ಎಲ್ಲಾ ಭರವಸೆಗಳನ್ನೂ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿದರು.
ತಮ್ಮ ಗೆಲವಿಗೆ ಎಲ್ಲ ಹಿರಿಯರ ಆಶೀರ್ವಾದ, ಕಳೆದ 6-7 ವರ್ಷದಿಂದ ಸರ್ಕಾರಿ ನೌಕರರಿಗೆ ಸ್ಪಂದಿಸಿದ ರೀತಿ ಕಾರಣ ಎಂದ ಅವರು, ಸರ್ಕಾರಿ ನೌಕರರು ತಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಕಾರ್ಯನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು. ಪ್ರಧಾನ ಕಾರ್ಯದರ್ಶಿ ಮೋಹನ್, ರಾಜ್ಯ ಪರಿಷತ್ ಸದಸ್ಯ ನರಸಿಂಹಯ್ಯ, ಖಜಾಂಚಿ ಶಾಂತರಾಜ್ ಇದ್ದರು.