ಫಲ ನೀಡದ ಕೋತಿ ರಾಮನ ಕಾರ್ಯಾಚರಣೆ
ಜೋಗ್ ಫಾಲ್ಸ್: ಜಗದ್ವಿಖ್ಯಾತ ಜೋಗ ಜಲಪಾತದಲ್ಲಿ ನೀರು ಪಾಲಾಗಿದ್ದ ಹುಬ್ಬಳ್ಳಿಯ ಮೂವರ ಶವಗಳನ್ನು ಮೇಲಕ್ಕೆತ್ತಲು ಚಿತ್ರದುರ್ಗದ ಜ್ಯೋತಿ ರಾಜ್ ನಡೆಸಿದ ಕಾರ್ಯಾಚರಣೆ ಮಂಗಳವಾರವೂ ಫಲ ನೀಡಲಿಲ್ಲ.
ಕಳೆದ ಎರಡ್ಮೂರು ದಿನಗಳಿಂದ ಬಿಡುವು ನೀಡಿದ್ದ ಮಳೆ ಸೋಮವಾರ ರಾತ್ರಿಯಿಂದ ಮತ್ತೆ ಜೋರಾಗಿದ್ದು ಜಲಪಾತದ ಕೆಳಭಾಗದಿಂದ ಮೇಲಕ್ಕೇರಿ ಅಲ್ಲಿಂದ ಶವಗಳನ್ನು ತರಲು ನಡೆಸಿದ ಪ್ರಯತ್ನ ಕೈಗೂಡಲಿಲ್ಲ. ಸೋಮವಾರ ಜಲಪಾತದ ಮೇಲ್ಭಾಗದಿಂದ ಕೆಳಕ್ಕಿಳಿದಿದ್ದ ಕೋತಿ ರಾಮ ಮಂಗಳವಾರ ಜಲಪಾತದ ಕೆಳಭಾಗದಿಂದ ಸುಮಾರು 300 ಅಡಿ ಎತ್ತರದಲ್ಲಿ 2 ಶವಗಳಿರುವುದನ್ನು ನೋಡಿರುವುದಾಗಿ ತಿಳಿಸಿದ್ದ. ಅಲ್ಲದೇ ಮಂಗಳವಾರ ಜಲಪಾತದ ಕೆಳಭಾಗದಿಂದ ನೀರಿನ ರಭಸ ಅಷ್ಟೊಂದು ಹೆಚ್ಚಾಗಿರದ ಕಾರಣ ಕೆಳಭಾಗದಿಂದಲೇ ಮೇಲಕ್ಕೇರುವುದಾಗಿ ತಿಳಿಸಿ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಕೆಳಭಾಗಕ್ಕೆ ತೆರಳಿದ್ದ. ಆದರೆ ಜಲಪಾತದ ಬಳಿಯಿರುವ ಬಂಡೆಗಳು ಸಾಕಷ್ಟು ಜಾರುತ್ತಿರುವುದರಿಂದ ಮತ್ತು ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಜಲಪಾತದ ಕೆಳಭಾಗಕ್ಕಿಳಿದ ಆತ ಜಲಪಾತದ ಹತ್ತಿರಕ್ಕೂ ತೆರಳಲು ಸಾಧ್ಯವಾಗದೇ ಬರಿಗೈನಲ್ಲಿ ಹಿಂತಿರುಗಬೇಕಾಯಿತು. ಸಿದ್ದಾಪುರ ಸಿಪಿಐ ವೀರೇಂದ್ರಕುಮಾರ್ ನಿರಂತರವಾಗಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಮಳೆಯಿಂದಾಗಿ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಬುಧವಾರ ಕೋತಿ ರಾಮ ಒಪ್ಪಿಕೊಂಡಲ್ಲಿ ಮತ್ತೊಮ್ಮೆ ಶವಗಳ ಹುಡುಕಾಟಕ್ಕೆ ಪ್ರಯತ್ನ ನಡೆಸಲಾಗುವುದು. ಜಲಪಾತದ ಮೇಲ್ಭಾಗದಲ್ಲಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸುವ ಕುರಿತು ಕಾರವಾರ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಶೀಫ್ರ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.