ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಡಿದ ವೀರ ಯೋಧರಿಗೆ ಗಾನ ಗೌರವ

Lingaraj Badiger
Updated On : 14 Aug 2013, 10:50 am

ಕ.ಪ್ರ.ವಾರ್ತೆ  ಶಿವಮೊಗ್ಗ  ಆ.13
ಅಲ್ಲಿ ದೇಶಭಕ್ತಿ ಮೇಳೈಸಿತ್ತು. ದೇಶಕ್ಕಾಗಿ ಪ್ರಾಣತೆತ್ತ ವೀರ ಯೋಧರನ್ನು ಹಾಡಿನ ಮೂಲಕ ಸ್ಮರಿಸಿದರು, ಕ್ಯಾಂಡಲ್ ಬೆಳಗಿ ಶ್ರದ್ಧಾಂಜಲಿ ಅರ್ಪಿಸಿದರು, ಕಾರ್ಗಿಲ್ ಹೋರಾಟವನ್ನು ನೆನಸಿಕೊಂಡರು, ಮನದುಂಬಿ ಖುಷಿಪಟ್ಟರು, ದೇಶ ಭಕ್ತಿಯ ಭಾವಪರವಶರಾಗಿ ಮುಗಿಲು ಮುಟ್ಟುವಂತೆ ಜೈ ಕಾರ ಹಾಕಿದರು...
ಇದೆಲ್ಲಾ ನಡೆದಿದ್ದು ಕುವೆಂಪು ರಂಗಮಂದಿರದಲ್ಲಿ. ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿಯಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಲ್ನಾಡ್ ಓಪನ್ ಗ್ರೂಪ್, ಸಾಂದೀಪನಿ ಎಜುಕೇಷನ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಗೀತ ಭಾರತಿ ಕಾರ್ಯಕ್ರಮ ಆಯೋಜಿಸಿತ್ತು, ಅಪರೂಪದ ಸಮಾರಂಭ ಈ ಎಲ್ಲಾ ಘಟನೆಗಳಿಗೆ ಸಾಕ್ಷಿಯಾಯಿತು.
ಗೀತ ನಮನ: ಕಾರ್ಯಕ್ರಮದಲ್ಲಿ ಉದ್ದುದ್ದ ಭಾಷಣವಿಲ್ಲ, ಹೊಗಳುವ ಪ್ರಮೇಯ ಇಲ್ಲವೇ ಇಲ್ಲ. ನೇರವಾಗಿ ಆರಂಭವಾಗಿದ್ದು ಮಕ್ಕಳ ಗೀತ ನಮನದೊಂದಿಗೆ.
ಆವಾಜ್ ದೋ ಹಂ ಏಕ್‌ಹೈ ಎಂಬ ಅರ್ಥಪೂರ್ಣ ಶೀರ್ಷಿಕೆಯಡಿ ನಡೆದ ಕಾರ್ಯಕ್ರಮದಲ್ಲಿ ಗಮನ ಸೆಳೆದಿದ್ದು ಮಕ್ಕಳೇ. ಭಾವಪರವಶರಾಗಿ ಹಾಡಿದ ಒಂದೊಂದು ಹಾಡಿಗೂ ಕಿಕ್ಕಿರಿದು ತುಂಬಿದ್ದ ಇಡೀ ಸಭಾಂಗಣ ತನ್ನ ಭಾವನೆ ವ್ಯಕ್ತಪಡಿಸುತ್ತಲೇ ಹೋಯಿತು. ಒಂದು ಹಾಡಿಗೆ ಮೂಕವಿಸ್ಮಿತವಾದರೆ, ಮತ್ತೊಂದು ಹಾಡಿಗೆ ಸಂಭ್ರಮಟ್ಟಿತು, ಮಗದೊಂದು ಹಾಡಿಗೆ ಸೆಟೆದು ಕುಳಿತಿತು. ಒಟ್ಟಾರೆ ಶೀರ್ಷಿಕೆಗೆ ತಕ್ಕುದಾದಂತೆ ಸ್ಪಂದಿಸುತ್ತಾ ಹೋಯಿತು.
600ಕ್ಕೂ ಹೆಚ್ಚು ವಿದ್ಯಾರ್ಥಿಗಳು: ಇದಕ್ಕೆ ಕಾರಣವಾಗಿದ್ದು ಜಿಲ್ಲೆಯ 13 ಶಾಲೆಗಳ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಡೆಸಿಕೊಟ್ಟ ಗೀತ ಗಾಯನ ಕಾರ್ಯಕ್ರಮ. ಪಿಇಎಸ್ ಪಬ್ಲಿಕ್ ಶಾಲೆ, ಮೇರಿ ಇಮ್ಯಾಕ್ಯುಲೇಟ್ ಹಿ.ಪ್ರಾ.ಶಾಲೆ, ನ್ಯಾಷನಲ್ ಪಬ್ಲಿಕ್ ಶಾಲೆ, ಭಾರತೀಯ ವಿದ್ಯಾಭವನ, ಡಿವಿಎಸ್ ಶಾಲೆ, ಶಾರದಾದೇವಿ ಅಂಧರ ವಸತಿ ಶಾಲೆ, ಜ್ಞಾನದೀಪ ಶಾಲೆ, ಮಂದಾರ ಜ್ಞಾನದಾಯಿನಿ ಶಾಲೆ, ಕಸ್ತೂರಿಬಾ ಪ್ರೌಢಶಾಲೆ, ಸಾಂದೀಪನಿ ಆಂಗ್ಲ ಪ್ರೌಢಶಾಲೆ, ಭದ್ರಾವತಿಯ ಸೇಂಟ್ ಚಾರ್ಲ್ಸ್ ಇಂಗ್ಲಿಷ್ ಶಾಲೆ, ಸಾಗರ ಅಮಟೆಕೊಪ್ಪದ ಹೊಂಗಿರಣ ಸ್ಕೂಲ್ ಆಫ್ ಎಕ್ಸಲೆನ್ಸಿಯ ವಿದ್ಯಾರ್ಥಿಗಳು ಪಾಲ್ಗೊಂಡು ದೇಶಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು.
ಹಾಡಿನ ಮಧ್ಯೆಯೇ ಸಹಚೇತನ ನಾಟ್ಯಾಲಯದ ವಿದ್ಯಾರ್ಥಿಗಳಿಂದ ನೃತ್ಯದ ಮೂಲಕ ದೇಶಕ್ಕೆ ನಮನ ಸಲ್ಲಿಸುವ ಕಾರ್ಯಕ್ರಮ ಕಳೆಗಟ್ಟಿತು.
ನೆನಪು ಮಾಡಿಕೊಟ್ಟ ಕರ್ನಲ್: ಸೈನ್ಯದಲ್ಲಿ ಅತ್ಯುನ್ನತ ಸಾಧನೆಗಾಗಿ ನೀಡಲಾಗುವ ಪ್ರಶಸ್ತಿಗಳನ್ನು ಮೂರನೇ ಸ್ಥಾನ ಪಡೆದಿರುವ ವೀರಚಕ್ರ ಸಮ್ಮಾನ್ ಗೌರವ ಹೊಂದಿರುವ ಕರ್ನಲ್ (ನಿವೃತ್ತ) ಎಂ.ಬಿ. ರವೀಂದ್ರನಾಥ್ ಅವರು ಕಾರ್ಗಿಲ್ ಯುದ್ಧದ ನೆನಪು ಮಾಡಿಕೊಟ್ಟರು. ಅಪರೂಪದ ವಿಡಿಯೋ ಪ್ರದರ್ಶನದ ಮೂಲಕ, ಯುದ್ಧ ಹೇಗಾಯಿತು, ಪಾಕಿಸ್ಥಾನ ಆಕ್ರಮಣ, ಭಾರತದ ಪ್ರತ್ಯುತ್ತರ, ಯುದ್ಧದಲ್ಲಿ ಮಡಿದ ಯೋಧರ ಮಾಹಿತಿ ಹೀಗೆ ಕಾರ್ಗಿಲ್ ಯುದ್ಧದ ಅಪರೂಪದ ಮಾಹಿತಿಗಳನ್ನು ತಿಳಿಸಿಕೊಡುವ ಪ್ರಯತ್ನ ವಿಡಿಯೋ ತುಣುಕಿನ ಮೂಲಕ ನೀಡಿ ಸಭಾಂಗಣ ಸ್ತಂಭೀಭೂತವಾಗುವಂತೆ ಮಾಡಿದರು. ಹಾಗೆಯೇ ಪ್ರಸ್ತುತ ಸನ್ನಿವೇಶದಲ್ಲಿ ದೇಶ ನಿರ್ಮಾಣದಲ್ಲಿ ಯುವ ಜನತೆಯ ಪಾತ್ರ ಕುರಿತು ಮಾತನಾಡಿದರು.
ಶಾಸಕ ಕೆ.ಬಿ. ಪ್ರಸನ್ನಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಚನ್ನಬಸಪ್ಪ ಉಪಸ್ಥಿತರಿದ್ದು ಶಿವಮೊಗ್ಗ ನಗರದ ಪರವಾಗಿ ಕರ್ನಲ್ ರವೀಂದ್ರನಾಥ್ ಅವರನ್ನು ಆತ್ಮೀಯವಾಗಿ ಗೌರವಿಸಿದರು.
ಪ್ರತಿ ಗಾಯನದ ಮಧ್ಯೆಯೂ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುತ್ತಾ, ಹೋರಾಟದ ಮಜಲುಗಳನ್ನು ತಿಳಿಸುತ್ತಾ ಕಾರ್ಯಕ್ರಮದ ನಿರೂಪಕ ಸಮನ್ವಯ ಕಾಶಿ ಗಮನ ಸೆಳೆದರು.
ಒಟ್ಟಾರೆ ಮಂಗಳವಾರ ಸಂಜೆ ಕುವೆಂಪು ರಂಗಮಂದಿರ ಅರ್ಥಪೂರ್ಣ ಕಾರ್ಯಕ್ರಮ ನಡೆಯಿತು, ಒಂದೂವರೆ ಸಾವಿರಕ್ಕೂ ಮಿಕ್ಕಿದ ಮಕ್ಕಳು-ಪೋಷಕರು ದೇಶಪ್ರೇಮದ ಹೊಳೆಯಲ್ಲಿ ಮಿಂದೆದ್ದರು.
ಮಾಗ್ ಸಮಿತಿ ಅಧ್ಯಕ್ಷ ಎಚ್. ಪರಮೇಶ್ವರ್, ಸಾಂದೀಪನಿ ಶಿಕ್ಷಣ ಟ್ರಸ್ಟ್‌ನ ಶ್ರೀನಿವಾಸ ವರ್ಮ, ಮಲ್ನಾಡ್ ಓಪನ್ ಗ್ರೂಪ್‌ನ ಲೀಡರ್ ರಾಜೇಶ್ ಅವಲಕ್ಕಿ, ಎ.ವಿ. ರಾಜೇಶ್ ಮತ್ತಿತರರ ನೇತೃತ್ವದ ತಂಡ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿತು.

ಯುದ್ಧ ಪೊಲಿಟಿಕಲ್ ಇಷ್ಯೂ
ಯುದ್ಧ ಎನ್ನುವುದು ಯಾವಾಗಲೂ ಬರೀ ಯುದ್ಧವಾಗಿರುವುದಿಲ್ಲ. ಅದೊಂದು ಮಾನಸಿಕ ಸ್ಥಿತಿ. ಉಳಿಯುವಿಕೆಗಾಗಿ ನಡೆಯುವ ಹೋರಾಟ. ಯುದ್ಧ ಇಲ್ಲದ ಪ್ರಪಂಚ, ಸೇನೆ ಇಲ್ಲದ ದೇಶವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವೀರಚಕ್ರ ಪ್ರಶಸ್ತಿ ಪುರಸ್ಕೃತ ಕರ್ನಲ್ (ನಿವೃತ್ತ) ಎಂ.ಬಿ. ವೀರೇಂದ್ರನಾಥ್ ಹೇಳಿದರು.
ಗೀತ ಭಾರತಿ ಕಾರ್ಯಕ್ರಮ ನಿಮಿತ್ತ ನಗರದ ಸ್ಕೌಟ್ ಭವನದಲ್ಲಿ ಗುರುವಾರ ಮಕ್ಕಳೊಂದಿಗೆ ಸಂವಾದ ನಡೆಸಿದ ಅವರು, ಯುದ್ಧ ಎನ್ನುವುದು ಯಾವಾಗಲೂ ಪೊಲಿಟಿಕಲ್ ಇಷ್ಯೂ ಎಂದರು.
ಮಾನವ ಸಂಬಂಧಗಳ ಅತೀರೇಖದ ಘಟ್ಟ ಯುದ್ಧ ಎಂದೂ ಅಭಿಪ್ರಾಯಪಟ್ಟರು.
  ಭಾರತದ ಜತೆ ಚೀನಾ ಹಾಗೂ ಪಾಕಿಸ್ತಾನ ಮದ್ಯೆ ನಡೆಯುತ್ತಿರುವ ತಗಾದೆಗೆ ಒಂದೇ ಕಾರಣ ಹೇಳಲು ಸಾಧ್ಯವಿಲ್ಲ. ಪಾಕಿಸ್ತಾನದ ಆಡಳಿತ ಇರುವುದು ಸೇನೆಯ ಕೈಯಲ್ಲಿ. ಸೇನೆ ಬಲವಾಗಲು ಒಬ್ಬ ಶತ್ರು ಬೇಕು. ಅದಕ್ಕಾಗಿ ಈ ತಿಕ್ಕಾಟ. ಇದು ಪಾಕಿಸ್ತಾನದ ಜನರ ತಪ್ಪಲ್ಲ.
  ಅಲ್ಲಿನ ಆಡಳಿತದ ತಪ್ಪು. ಚೀನಾ ಜತೆಗಿನ ಭಿನ್ನಾಭಿಪ್ರಾಯಕ್ಕೆ ಬೇರೆ ಕಾರಣವಿದೆ. ಇಡೀ ಏಷ್ಯಾದಲ್ಲಿ ಚೀನಾಕ್ಕೆ ಸವಾಲೆಸೆಯುವ ಸಾಮರ್ಥ್ಯ ಹೊಂದಿರುವುದು ಭಾರತ ಮಾತ್ರ ಎಂದರು.
ಈ ಸಮಸ್ಯೆಗಳನ್ನು ಬಗೆಹರಿಸಬೇಕೆಂದರೆ ಎರಡೇ ದಾರಿ. ಒಂದು ಯುದ್ಧ ಮಾಡಬೇಕು. ಅದು ಸಾಧ್ಯವಿಲ್ಲ ಎಂದರೆ ಮಾತುಕತೆ ಮಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದ ಕರ್ನಲ್ ವೀರೇಂದ್ರನಾಥ್, ಮಾತುಕತೆಗಳು ಸದಾ ನಡೆಯುತ್ತಲೇ ಇರುತ್ತವೆ. ಸಮಸ್ಯೆಗಳು ಬಗೆಹರಿಯಬೇಕೆಂದರೆ ಆಯಾ ದೇಶದ ಜನರು ಸರ್ಕಾರಗಳನ್ನು ಈ ದಿಕ್ಕಿನಲ್ಲಿ ಒತ್ತಾಯಿಸಬೇಕು ಎಂದರು.
ಒಂದೇ ಕಾರಣ ಇಲ್ಲ: ಆಂತರಿಕ ಭಯೋತ್ಪಾದನೆಗೆ ಹಲವು ಕಾರಣಗಳಿವೆ. ಈ ಭಯೋತ್ಪಾದನೆಯನ್ನು ಒಂದೇ ಜಾತಿ, ಒಂದೇ ವರ್ಗದವರು ಆಂತರಿಕ ಭಯೋತ್ಪಾದನೆಯಲ್ಲಿ ತೊಡಗಿದ್ದಾರೆ ಎಂದು ಹೇಳುವುದೂ ಸಹ ಸರಿ ಅಲ್ಲ ಎಂದು ಅವರು ಹೇಳಿದರು.
ಆರ್ಥಿಕ, ಜಾತಿ ಇತ್ಯಾದಿ ಕಾರಣಗಳಿಂದಾಗುವ ಶೋಷಣೆ, ಸರ್ಕಾರದ ನಿರ್ಲಕ್ಷ್ಯ, ನ್ಯಾಯ ಸಿಗದಿರುವುದು ಇತ್ಯಾದಿ ಕಾರಣಗಲಿವೆ. ಈ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಬಗೆಹರಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಕೌಟ್ ಮತ್ತು ಗೈಡ್ಸ್ ಆಯುಕ್ತ ಉಮೇಶ್ ಶಾಸ್ತ್ರಿ, ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ನೂರ್ ಅಹ್ಮದ್ ಇದ್ದರು. ಮಲ್ನಾಡ್ ಓಪನ್ ಗ್ರೂಪ್‌ನ ರಾಜೇಶ್ ಅವಲಕ್ಕಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement