'ಶಾಸಕ ಅಪ್ಪಾಜಿ ಆರೋಪ ನಿರಾಧಾರ'
ಭದ್ರಾವತಿ: ಶಾಸಕ ಅಪ್ಪಾಜಿಯವರು ಸಾರ್ವಜನಿಕ ಸಭೆಯಲ್ಲಿ ಮಾಜಿ ಶಾಸಕ ಸಂಗಮೇಶ್ವರ ಅವರ ಅವಧಿಯಲ್ಲಿ ಸರ್ಕಾರಿ ಅನುದಾನಗಳು ದುರ್ಬಳಕೆಯಾಗಿವೆ ಎಂದು ಹೇಳಿರುವುದು ಖಂಡನೀಯವೆಂದು ಮಾಜಿ ಶಾಸಕ ಸಂಗಮೇಶ್ವರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅನುದಾನ ದುರ್ಬಳಕೆಯಾಗಿದ್ದರೆ ಅದನ್ನು ತನಿಖೆ ಮಾಡಿಸಿ ಸಾಬೀತು ಪಡಿಸಿ ತೋರಿಸಿದಲ್ಲಿ ತಾವು ರಾಜಕೀಯ ನಿವೃತ್ತಿ ಹೊಂದುವುದಾಗಿ ತಿಳಿಸಿರುವ ಸಂಗಮೇಶ್ವರ, ಒಂದುವೇಳೆ ಅದು ಸಾಧ್ಯವಾಗದಿದ್ದರೆ ಶಾಸಕ ಅಪ್ಪಾಜಿ ರಾಜಕೀಯಕ್ಕೆ ರಾಜಿನಾಮೆ ನೀಡಲಿ ಎಂದು ಸವಾಲೆಸೆದಿದ್ದಾರೆ. ಈ ರೀತಿ ಸುಳ್ಳು ಹೇಳಿಕೆ ನೀಡಿ ಮೋಸ ಮಾಡುವುದು ಸರಿಯಲ್ಲ. ಕೇವಲ ಓರ್ವ ವಿಐಎಸ್ಎಲ್ ಕಾರ್ಮಿಕರಾಗಿದ್ದ ಅಪ್ಪಾಜಿ ಇಷ್ಟೊಂದು ಆಸ್ತಿ ಮಾಡಿದ್ದಾದರೂ ಹೇಗೆ ಉತ್ತರ ನೀಡಲಿ ಎಂದು ಸಂಗಮೇಶ್ವರ ಸವಾಲು ಮಾಡಿದ್ದಾರೆ.