ಸಾಮಾಜಿಕ ಬಹಿಷ್ಕಾರ ವಾಪಸ್‌ಗೆ ಮನವಿ
ಶಿವಮೊಗ್ಗ: ಸೊರಬ ತಾಲೂಕು ಉಳುವಿ ಹೋಬಳಿ ಬರಗಿ ಗ್ರಾಮದ ನಿವಾಸಿ ರಾಮಚಂದ್ರಪ್ಪ ಮತ್ತವರ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದ್ದು, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಿತಕ್ಕೆ ಮಾಜಿ ಸಚಿವ ಹರತಾಳು ಹಾಲಪ್ಪ ಮನವಿ ಮಾಡಿದ್ದಾರೆ. ಸೋಮವಾರ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದ ಹಾಲಪ್ಪ ಹಾಗೂ ಬಹಿಷ್ಕಾರಕ್ಕೊಳಗಾದ ರಾಮಚಂದ್ರಪ್ಪ ಹಾಗೂ ಅವರ ಪತ್ನಿ ಶಾಂತಲಾ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿದರು.
ಗ್ರಾಮ ಸಮಿತಿ ಅಧ್ಯಕ್ಷ ಕನ್ನಪ್ಪ ಹಾಗೂ ತಾಪಂ ಸದಸ್ಯ ನಿಂಗಪ್ಪ ಬರಗಿ ಗ್ರಾಮದಲ್ಲಿ ಪಂಚಾಯಿತಿ ಮಾಡಿ ರಾಮಚಂದ್ರಪ್ಪ ಮತ್ತು ಅವರ ಕುಟುಂಬಕ್ಕೆ ರಾಜಕೀಯ ಕುಮ್ಮಕ್ಕಿನಿಂದ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಬಹಿಷ್ಕಾರಕ್ಕೊಳಗಾದ ಕುಟುಂಬದ ವ್ಯಕ್ತಿಗಳು ಸಾರ್ವಜನಿಕವಾಗಿ ಯಾರೊಂದಿಗೂ ಮಾತನಾಡುವಂತಿಲ್ಲ. ದೇವಸ್ಥಾನಕ್ಕೂ ಹೋಗುವಂತಿಲ್ಲ. ಅವರನ್ನು ಯಾರೂ ಕೂಲಿ ಕೆಲಸಕ್ಕೆ ಕರೆಯುವಂತಿಲ್ಲ ಮತ್ತು ಯಾರ ಮನೆಗೂ ಭೇಟಿ ನೀಡುವಂತಿಲ್ಲ. ಸಾರ್ವಜನಿಕವಾಗಿ ಬಳಸುವ ನೀರನ್ನೂ ಬಳಸುವಂತಿಲ್ಲ ಎಂದು ಡಂಗೂರ ಹೊಡಿಸಿ ಬಹಿಷ್ಕಾರ ಹಾಕಿದ್ದಾರೆ. ಇದನ್ನು ಉಲ್ಲಂಘಿಸಿದವರಿಗೆ 1 ಸಾವಿರ ದಂಡ ಹಾಕಲಾಗುತ್ತದೆ ಎಂದು ಎಚ್ಚರಿಸಲಾಗಿದೆ. ಈ ಎಲ್ಲ ಬೆಳವಣಿಗೆಯಿಂದ ರಾಮಚಂದ್ರಪ್ಪ ಮತ್ತು ಆತನ ಕುಟುಂಬಕ್ಕೆ ಅಪಮಾನ ಆಗುವುದರೊಂದಿಗೆ ನಿತ್ಯದ ಬದುಕಿಗೆ ತೊಂದರೆಯಾಗಿದೆ ಎಂದು ಜಿಲ್ಲಾಧಿಕಾರಿಗೆ ಅರ್ಪಿಸಿದ ಮನವಿಯಲ್ಲಿ ತಿಳಿಸಿದ್ದಾರೆ.