ಇಂದು ಸ್ವಾತಂತ್ರ್ಯೋತ್ಸವ ಸಂಭ್ರಮ: ವಿವಿಧ ಕಾರ್ಯಕ್ರಮ
ಶಿವಮೊಗ್ಗ: 67ನೇ ಸ್ವಾತಂತ್ರ್ಯೋತ್ಸವ ನಿಮಿತ್ತ ನಗರದ ವಿವಿಧ ಕಡೆ 15ರಂದು ಕಾರ್ಯಕ್ರಮ ಆಯೋಜನೆಗೊಂಡಿದೆ. ಬೆಳಿಗ್ಗೆ 7.30ಕ್ಕೆ ನಗರಸಭಾ ಆವರಣದಲ್ಲಿ ನಗರಸಭೆಯ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಧ್ವಜಾರೋಹಣ ನೆರವೇರಿಸುವರು.
ಜಿಪಂ ಆವರಣದಲ್ಲಿ ಬೆಳಿಗ್ಗೆ 8ಗಂಟೆಗೆ ಏರ್ಪಡಿಸಿರುವ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಜಿಪಂ ಅಧ್ಯಕ್ಷರಾದ ಗೀತಾ ಬಿ. ಮಲ್ಲಿಕಾರ್ಜುನ ಧ್ವಜಾರೋಹಣ ನೆರವೇರಿಸುವರು. ಈ ಸಂದರ್ಭದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಸಿಕಾಂತ್ ಸೆಂಥಿಲ್ ಭಾಗಹಿಸುವರು.
ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಬೆಳಿಗ್ಗೆ 9 ಗಂಟೆಗೆ ನಗರದ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ಹಮ್ಮಿಕೊಂಡಿದೆ. ಧ್ವಜಾರೋಹಣವನ್ನು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ನೆರವೇರಿಸುವರು.
ಕೇಂಬ್ರಿಡ್ಜ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಬೆಳಿಗ್ಗೆ 7.30ಕ್ಕೆ ಧ್ವಜಾರೋಹಣವನ್ನು ಗುರುಬಸವೇಶ್ವರ ಎಜುಕೇಷನ್ ಟ್ರಸ್ಟ್ನ ಅಧ್ಯಕ್ಷೆ ಯಶೋಧಮ್ಮ ಬಿ. ಶೇಖರಪ್ಪ ನೆರವೇರಿಸುವರು. ಬೆಳಿಗ್ಗೆ 11ರಿಂದ 1ಗಂಟೆವರೆಗೆ ಮಕ್ಕಳ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ.
ಪ್ರತಿಧ್ವನಿ ಸಮಾಜ ಸೇವಾ ಸಂಘ ತಾಲೂಕು ಕಚೇರಿ ಮುಂಭಾಗದಲ್ಲಿ ಬೆಳಿಗ್ಗೆ 8.30ಕ್ಕೆ ಕಾಡು ಬೆಳಸಿ ನಾಡು ಉಳಿಸಿ ಎಂಬ ಪರಿಸರ ಮುಖಿ ಕಾರ್ಯಕ್ರಮದಡಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ ಏರ್ಪಡಿಸಿದೆ.
ಕಸ್ತೂರಬಾ ಬಾಲಿಕ ಪದವಿಪೂರ್ವ ಕಾಲೇಜು ಆವರಣದಲ್ಲಿ ಬೆಳಿಗ್ಗೆ 7.45ಕ್ಕೆ ಸ್ವಾತಂತ್ರ್ಯ ದಿನಾಚರಣೆ ಹಮ್ಮಿಕೊಂಡಿದ್ದು, ಕಾಲೇಜಿನ ಅಧೀಕ್ಷಕ ಎಸ್.ಬಿ.ಅಶೋಕಕುಮಾರ್ ಧ್ವಜಾರೋಹಣ ನೆರವೇರಿಸುವರು.
ಗಾಂಧಿ ಬಸಪ್ಪ ಮತ್ತು ಹಳದಮ್ಮ ಟ್ರಸ್ಟ್ ಗಾಂಧಿ ಬಸಪ್ಪ ಅವರ ವಂದೇ ಮಾತರಂ ನಿಲಯದಲ್ಲಿ ಬೆಳಿಗ್ಗೆ 7.15ಕ್ಕೆ 67ನೇ ಸ್ವಾತಂತ್ರ್ಯ ದಿನಾಚರಣೆ ಹಮ್ಮಿಕೊಂಡಿದೆ. ಅಂಕಣಕಾರ ಎಂ.ಎಸ್. ಸಂದರ್ರಾಜ್ ಧ್ವಜಾರೋಹಣ ಮಾಡುವರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ ಏರ್ಪಡಿಸಿದ್ದು, ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಧ್ವಜಾರೋಹಣ ನೆರವೇರಿಸುವರು. ಶಾಸಕ ಕೆ.ಬಿ. ಪ್ರಸನ್ನಕುಮಾರ್, ಜಿಲ್ಲಾಧ್ಯಕ್ಷ ಆರ್. ಪ್ರಸನ್ನಕುಮಾರ್, ಕಾಂಗ್ರೆಸ್ ಎಲ್ಲಾ ಬ್ಲಾಕ್ ಪದಾಧಿಕಾರಿಗಳು ಉಪಸ್ಥಿತರಿರುವರು. ಕರ್ನಾಟಕ ಲೇಖಕಿಯರ ಸಂಘ ನಗರದ ಕರ್ನಾಟಕ ಸಂಘದಲ್ಲಿ ಸ್ವಾತಂತ್ರ್ಯ ಸಂಗ್ರಾಮ ಹಾಗೂ ಸಂಭ್ರಮ ಕಾವ್ಯಧಾರೆ ಕವಿಗೋಷ್ಠಿ ಕಾರ್ಯಕ್ರಮ ಆಯೋಜಿಸಿದೆ.
ಧ. ಗ್ರಾ.ಸಂಘದಿಂದ 200ಕಡೆ ಕಾರ್ಯಕ್ರಮ ಆಯೋಜನೆ
ಶಿವಮೊಗ್ಗ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ಆಗಸ್ಟ್ 15ರಂದು ಜಿಲ್ಲೆಯಾದ್ಯಂತ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡಿದೆ.
ಯೋಜನೆಯ ಅಧ್ಯಕ್ಷ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಆಶಯ ಮತ್ತು ಆಶೀರ್ವಾದದೊಂದಿಗೆ ಸ್ವಾತಂತ್ರ್ಯ ದಿನವನ್ನು ಸಾಮಾಜಿಕ ಕಳಕಳಿಯೊಂದಿಗೆ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದ್ದೇವೆ ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ಸುಧೀರ್ ಕುಮಾರ್ ಬಂಟ್ವಾಳ್ ತಿಳಿಸಿದ್ದಾರೆ.
ಜಿಲ್ಲೆಯ 200 ಸ್ಥಳಗಳಲ್ಲಿ ನಮ್ಮ ಯೋಜನೆಯ ವತಿಯಿಂದ ನಾಗರಿಕ ಪ್ರಜ್ಞೆಯನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾಲೋನಿಗಳು, ಸಾರ್ವಜನಿಕ ಸ್ಥಳ, ಶಾಲಾ ಆವರಣ, ಬಸ್ ನಿಲ್ದಾಣ ಮುಂತಾದ ಕಡೆ ಆವರಣ ಸ್ವಚ್ಛತೆ, ಮೋರಿ ಚರಂಡಿ ಸ್ವಚ್ಛತೆ, ಪ್ಲಾಸ್ಟಿಕ್ ಹೆಕ್ಕುವುದು, ಬಯಲು ಮಲ ವಿಸರ್ಜನೆ ಮಾಡದಂತೆ ಮಾಹಿತಿ ನೀಡುವುದು ಸೇರಿದಂತೆ ಪರಿಸರ ಜಾಗೃತಿ ಮತ್ತು ಆರೋಗ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದವರು ವಿವರಿಸಿದ್ದಾರೆ.
ಸ್ವಚ್ಛತೆ ಮತ್ತು ಸಮೃದ್ಧ-ಸ್ವತಂತ್ರ ಭಾರತದ ಕಲ್ಪನೆಯೊಂದಿಗೆ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಸಾರ್ವಜನಿಕರು ಕೈಜೋಡಿಸುವಂತೆ ಸುಧೀರ್ ಕೋರಿದ್ದಾರೆ.
ದೇಶಭಕ್ತಿ ಗೀತೆ ಸ್ಪರ್ಧೆ
ಭದ್ರಾವತಿ: ಪಟ್ಟಣದ ವೈಎಂಸಿಎ ವತಿಯಿಂದ 67ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಎರಡನೇ ತರಗತಿಯಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆಗಳು ಮತ್ತು ಭಾವಗೀತೆಗಳ ಗಾಯನ ಸ್ಪರ್ಧೆಯನ್ನು ವೇನ್ಸ್ ಸ್ಮಾರಕ ಚರ್ಚಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಸುಮಾರು 180 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಎಸ್.ಬಿ. ಶಿವಲಿಂಗಪ್ಪ, ಬನಶಂಕರಿ ವಿಜಯಕುಮಾರ್, ಪೂಜನೀಯ ರಾಜು ಮೇದಗೊಪ್ಪ ಮತ್ತು ದಿನಮಣಿ ತೀರ್ಪುಗಾರರಾಗಿ ಆಗಮಿಸಿದ್ದರು.
ವಿಜೇತರಾದವರಿಗೆ ಜೋಸೆಫ್ ಸಂತ ಮೇಯರ್ ಬಹುಮಾನಗಳನ್ನು ವಿತರಿಸಿದರು.