ಒಂದಾದರೂ ಸಸಿ ನೆಡಿ
ಕ.ಪ್ರ.ವಾರ್ತೆ ಶಿವಮೊಗ್ಗ ಆ.14
ನಿಮ್ಮ ಇಡೀ ಜೀವಮಾನದಲ್ಲಿ ಒಂದೇ ಒಂದು ಸಸಿ ನೆಡಿ. ಅದನ್ನು ಕನಿಷ್ಠ ಮೂರು ವರ್ಷ ಆರೈಕೆ ಮಾಡಿ...
ಈ ಸಂದೇಶವನ್ನು ಹೊತ್ತು ಕೊಲ್ಕತ್ತಾ ಮೂಲದ ಉಜ್ಜಲ್ ಪೌಲ್ ಎಂಬ ಯುವಕ ಒಬ್ಬಂಟಿಯಾಗಿ ದೇಶ ಸುತ್ತಲು ಹೊರಟಿದ್ದಾನೆ. ಕಳೆದ 20 ತಿಂಗಳಲ್ಲಿ ಸುಮಾರು 16 ಸಾವಿರ ಕಿ.ಮೀ. ಸುತ್ತಿರುವ ಇವರು ಇನ್ನೂ 4 ಸಾವಿರ ಕಿ.ಮೀ. ಸುತ್ತುವುದು ಬಾಕಿ ಇದೆ. ಈಗಾಗಲೇ ಪಶ್ಚಿಮ ಬಂಗಾಳ, ಜಮ್ಮು- ಕಾಶ್ಮೀರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಪಂಜಾಬ್, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳನ್ನು ಸುತ್ತಿದ್ದು, ಈಗ ಕರ್ನಾಟಕದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಮಲೆನಾಡ ಜಿಲ್ಲೆಗೆ ಬಂದಿರುವ ಅವರು ಬುಧವಾರ ಸುದ್ದಿಗಾರರೊಂದಿಗೆ ತಮ್ಮ ಅನುಭವ ಹಂಚಿಕೊಂಡರು.
ಆಮ್ಲಜನಕ ಖರೀದಿ ಸಂದರ್ಭ: ಹಲವು ಕಾರಣಗಳಿಂದ ಮರಗಳನ್ನು ಕಡಿಯಬೇಕಾಗುತ್ತದೆ. ಇದಕ್ಕೆ ಬದಲಾಗಿ ಒಂದು ಸಸಿ ನೆಟ್ಟು ಬೆಳೆಸಿ. ನಾವು ಈ ರೀತಿ ಮಾಡದಿದ್ದರೆ ಮುಂದೊಂದು ದಿನ ಆಮ್ಲಜನಕವನ್ನು ಖರೀದಿಸುವ ಸಂದರ್ಭ ಬರುತ್ತದೆ ಎಂದು ಎಚ್ಚರಿಸಿದರು.
70 ವರ್ಷದ ಜೀವಿತಾವಧಿಗೆ ಬೇಕಾಗಿರುವ ಆಮ್ಲಜನಕವನ್ನು ಖರೀದಿ ಮಾಡಲು 5.36 ಕೋಟಿ ಬೇಕಾಗುತ್ತದೆ. ಅಲ್ಲದೇ ಆಮ್ಲಜನಕ ಇಲ್ಲದೇ ಮೂರು ನಿಮಿಷ ಸಹ ಜೀವಿಸಲು ಸಾಧ್ಯವಿಲ್ಲ. ಆದ್ದರಿಂದ ಈ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸಬೇಕು ಎಂದರು.
10 ವರ್ಷದಲ್ಲಿ 5 ಲಕ್ಷ ಕಿ.ಮೀ.: ಉಜ್ಜಲ್ ಪೌಲ್ ಅವರು ಕೃಷಿ ಪದವಿ ಜತೆಗೆ ಫೈನಾನ್ಸ್ ಮತ್ತು ಮಾರ್ಕೆಟಿಂಗ್‌ನಲ್ಲಿ ಎಂಬಿಎ ಪದವಿಯನ್ನೂ ಪಡೆದಿದ್ದಾರೆ. ಉತ್ತರಕಾಶಿಯಲ್ಲಿರುವ ನೆಹರೂ ಇನ್‌ಸ್ಟಿಟ್ಯೂಟ್ ಆಫ್ ಮೌಂಟನಿಯರಿಂಗ್‌ನಲ್ಲಿ ಸರ್ಜ್ ಅಂಡ್ ರಸ್ಕ್ಯೂ ಕೋಚಿಂಗ್ ಸಹ ಪಡೆದಿದ್ದಾರೆ. ಆದರೂ ಇವರಿಗೆ ಪರಿಸರ ಜಾಗೃತಿಗಾಗಿ ದೇಶ ಸುತ್ತುವ ಹಂಬಲ. ಮುಂದೊಂದು ದಿನ ಪ್ರಪಂಚ ಪರ್ಯಟನ ಮಾಡುವ ಚಿಂತನೆಯನ್ನೂ ಹೊಂದಿದ್ದಾರೆ. ಇದು 10 ವರ್ಷದಲ್ಲಿ 5 ಲಕ್ಷ ಕಿ.ಮೀ. ಸಂಚಾರ ನಡೆಸಿ 205 ದೇಶಗಳನ್ನು ಭೇಟಿ ಮಾಡುವ ಕಾರ್ಯ. ಇದಕ್ಕಾಗಿ ವಿಶ್ವಸಂಸ್ಥೆಯ ಅನುಮತಿಗಾಗಿ ಕಾಯುತ್ತಿದ್ದಾರೆ.
ನಾನು ಸೈಕಲ್‌ನಲ್ಲಿ ದೇಶ ಪರ್ಯಟನ ಹೊರಟಾಗ ನನ್ನ ಜೇಬಿನಲ್ಲಿದ್ದುದು 927 ಮಾತ್ರ. ಸೈಕಲ್ ಹತ್ತಿ ಪ್ರವಾಸ ಹೊರಟೆ. ಅತ್ಯಂತ ಹೆಚ್ಚು ಬಿಸಿಲಿದ್ದ ಮರುಭೂಮಿ ಪ್ರದೇಶ, ಶೂನ್ಯಕ್ಕಿಂತಲೂ ಕಡಿಮೆ ತಾಪಮಾನವಿದ್ದ ಹಿಮಚ್ಛಾದಿತ ಪ್ರದೇಶ, ಅತಿ ಹೆಚ್ಚು ಮಳೆ ಬೀಳುತ್ತಿದ್ದ ಪ್ರದೇಶದಲ್ಲಿ ಸಾಗಿ ಬಂದಿದ್ದೇನೆ. ನನ್ನ ಆರೋಗ್ಯದಲ್ಲಿ ಯಾವುದೇ ಏರುಪೇರು ಆಗಿಲ್ಲ. ಹೋದಡೆಯಲ್ಲೆಲ್ಲಾ ಉತ್ತಮ ಸ್ವಾಗತ ಸಿಕ್ಕಿದೆ. ದೇವಸ್ಥಾನ, ಮಸೀದಿ, ಗುರುದ್ವಾರ, ಪೊಲೀಸ್ ಠಾಣೆಗಳಲ್ಲಿ
ಮಲಗಲು ಅವಕಾಶ ಸಿಕ್ಕಿದೆ. ಶಾಲಾ ಮಕ್ಕಳೊಂದಿಗೆ ಬಿಸಊಿಟ ಸೇವಿಸಿದ್ದೇನೆ. ಪರಿಸರ ಜಾಗೃತಿಯೇ ನನ್ನ ಮುಖ್ಯ ಗುರಿ ಎಂದರು.
ಬೀಳ್ಕೊಡುಗೆ: ಶಿವಮೊಗ್ಗಕ್ಕೆ ಆಗಮಿಸಿದ್ದ ಉಜ್ಜಲ್ ಪೌಲ್ ಅವರಿಗೆ ಯೂಥ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕದಿಂದ ಬೀಳ್ಕೊಡಲಾಯಿತು.
ಯೂಥ್ ಹಾಸ್ಟೆಲ್ ಛೇರ್‌ಮನ್ ಆ.ನಾ. ವಿಜೇಂದ್ರರಾವ್, ರಾಜ್ಯ ಕಾರ್ಯಕಾರಿ ಮಂಡಳಿಯ ನಿರ್ದೇಶಕ ಜಿ. ವಿಜಯಕುಮಾರ ಹಾಗೂ ಡಾ. ಶ್ರೀಪತಿ, ಕೆ.ಬಿ. ರವಿಶಂಕರ್, ಡಾ. ಶೇಖರ್ ಗೌಳೇರ್, ಪ್ರಾಣೇಶ್, ಎಸ್.ಆರ್. ಅಶ್ವಿನಿ, ಸತ್ಯ ಪ್ರೇಮಾ, ನಿಸರ್ಗ ಯೂಥ್ ಹಾಸ್ಟಲ್‌ನ ಮಂಜುನಾಥ ಉಪಸ್ಥಿತರಿದ್ದರು.