ಬಹುದಿನದ ಬೇಡಿಕೆಗೆ ಸಂಸದ ರಾಘವೇಂದ್ರ ಸ್ಪಂದನೆ
ಕ.ಪ್ರ.ವಾರ್ತೆ ಶಿಕಾರಿಪುರ ಆ.14 ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಬಹುದಿನದ ಬೇಡಿಕೆಯಾದ ಕಾಲುದಾರಿ ನಿರ್ಮಾಣಕ್ಕೆ ಸಂಸದ ರಾಘವೇಂದ್ರ ಸ್ಪಂದಿಸಿ ಸ್ಥಳೀಯ ಆಡಳಿತದ ಜತೆ ಸ್ಥಳ ವೀಕ್ಷಣೆ ನಡೆಸಿ ಶೀಘ್ರ ತಾತ್ಕಾಲಿಕ ಕಾಲುದಾರಿ ನಿರ್ಮಾಣದ ಮೂಲಕ ವಿದ್ಯಾರ್ಥಿಗಳಿಗೆ ಕಾಲೇಜಿಗೆ ತೆರಳಲು ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪಟ್ಟಣದಿಂದ ಅಂದಾಜು 3 ಕಿಮೀ ದೂರದಲ್ಲಿನ ಸ.ಪ್ರ.ದ. ಕಾಲೇಜಿಗೆ ಕೋಟ್ಯಂತರ ರೂ. ವೆಚ್ಚದಲ್ಲಿ ನೂತನ ಕಟ್ಟಡ, ಆಡಿಟೋರಿಯಂ, ವಿದ್ಯಾರ್ಥಿ ವಸತಿ ನಿಲಯ, ಗ್ರಂಥಾಲಯ ಮತ್ತಿತರ ಹಲವು ಕಾಮಗಾರಿ ಭರದಿಂದ ಆರಂಭವಾಗಿ ಹಲವು ಪೂರ್ಣಗೊಂಡಿದ್ದರೂ, ಅತ್ಯಗತ್ಯವಾದ ಸಮೀಪದ ಕಾಲು ದಾರಿ ಮಾತ್ರ ಕೆಸರು ಗದ್ದೆಯಾಗಿ ಕಾಲೇಜಿನ ವಿದ್ಯಾರ್ಥಿಗಳಿಗೆ ದುಸ್ವಪ್ನವಾಗಿ ಕಾಡುತ್ತಿರುವ ಸಮಸ್ಯೆ ಬಗ್ಗೆ ಶೀಘ್ರ ಸ್ಪಂದಿಸಿದ ಸಂಸದ ರಾಘವೇಂದ್ರ ಸ್ಥಳ ಪರಿಶೀಲಿಸಿ, ಅಗತ್ಯವಾದ ಸಮೀಪದ ಕಾಲು ದಾರಿ ನಿರ್ಮಾಣಕ್ಕೆ ಹಾಜರಿದ್ದ ಪುರಸಭಾ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.
ದೊಡ್ಡ ಕಾಲೇಜು: ಶಿಕಾರಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಿಎ. ಬಿಕಾಂ, ಬಿಎಸ್ಸಿ ಜತೆಗೆ ವಿವಿಧ ಬಗೆಯ ಸ್ನಾತಕೋತ್ತರ ಅಧ್ಯಯನ ಕೇಂದ್ರವಾಗಿ ಸಾವಿರಾರು ವಿದ್ಯಾರ್ಥಿಗಳ ಬಹು ದೊಡ್ಡ ಕಾಲೇಜು ಎಂಬ ಹೆಗ್ಗಳಿಕೆ ಜತೆಗೆ ಸುತ್ತಮುತ್ತಲಿನ ಏಕೈಕ ಸರ್ಕಾರಿ ಕಾಲೇಜಾಗಿದೆ.
ಅಧಿಕಾರಿಗಳ ಜತೆಗೆ ಕಾಲೇಜನ್ನು ಸಂಪೂರ್ಣ ವೀಕ್ಷಿಸಿದ ಸಂಸದ ರಾಘವೇದ್ರ ವಿಪರೀತ ಮಳೆಯಿಂದಾಗಿ ವಿದ್ಯಾರ್ಥಿಗಳು ಕಾಲುದಾರಿ ಸಮಸ್ಯೆಗೆ ಕೂಡಲೇ ಜಲ್ಲಿ, ಗೊಚ್ಚು ಮಣ್ಣು ಮೂಲಕ ತಾತ್ಕಾಲಿಕ ರಸ್ತೆಯನ್ನು ಸಮೀಪದಲ್ಲಿ ಭರದಿಂದ ಸಾಗಿರುವ ವಿದ್ಯಾರ್ಥಿನಿ ವಸತಿ ನಿಲಯದಿಂದ ಪೌರವಿಹಾರದ ಮೂಲಕ ಶಿವಮೊಗ್ಗ ರಸ್ತೆಗೆ ಜೋಡಿಸುವಂತೆ ಸೂಚಿಸಿದರು.
ಅಲಮಾಧಾನ: ಯುಜಿಸಿ ಅನುದಾನದಿಂದ ರು. 60 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮಹಿಳಾ ಹಾಸ್ಟೆಲ್ ಕಟ್ಟಡ ಆಮೆಗತಿ ವೇಗದ ಕಾಮಗಾರಿಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ಕೂಡಲೇ ಸಂಬಂದಿಧಿಸಿದ ಗುತ್ತಿಗೆದಾರ ಹಾಗೂ ಇಲಾಖೆಯ ಜತೆಗೆ ಪತ್ರ ವ್ಯವಹಾರ ನಡೆಸಿ ವೇಗಕ್ಕೆ ಚಾಲನೆ ನೀಡುವಂತೆ ಪ್ರಾಚಾರ್ಯ ಪ್ರೊ. ನಾಗೇಂದ್ರಪ್ಪನವರಿಗೆ ಸೂಚಿಸಿದರು.
ಕಾಲೇಜಿಗೆ ಸುಸಜ್ಜಿತ ಶಾಶ್ವತ ರಸ್ತೆಯ ನಿರ್ಮಾಣಕ್ಕಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸಮೀಪದ ಮರಗಿಡಗಳಿಗೆ ಹಾನಿಯಾಗದ ರೀತಿ ಗುಣಮಟ್ಟದ ಕಾಮಗಾರಿ ಕೈಗೆತ್ತಿಕೊಳ್ಳಲು ಸ್ಥಳದಲ್ಲಿದ್ದ ಗುತ್ತಿಗೆದಾರ ಶಿವಾನಂದಪ್ಪನವರಿಗೆ ಸೂಚಿಸಿದರು.
ತಂಗುದಾಣಕ್ಕೆ ಆದೇಶ: ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಮೀಪದಲ್ಲಿ ಪ್ರಯಾಣಿಕರ ಸುಸಜ್ಜಿತ ತಂಗುದಾಣ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲು ಪುರಸಭಾ ಮುಖ್ಯಾಧಿಕಾರಿಗೆ ಆದೇಶಿಸಿದ ಅವರು, ಕಾಲೇಜಿನ ನೂತನ ಶೌಚಾಲಯ ಅವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಕಾಲೇಜು ಸಿಬ್ಬಂದಿ ಜತೆಗೆ ವಿದ್ಯಾರ್ಥಿಗಳಲ್ಲಿ ಸಾರ್ವಜನಿಕ ಆಸ್ತಿ ಸಂರಕ್ಷಣೆಗೆ ಜಾಗೃತಿ ಮೂಡಿಸುವ ಬಗ್ಗೆ ಕ್ರಮಕ್ಕೆ ಸೂಚಿಸಿದರು.
ಪಟ್ಟಣದ ಚನ್ನಕೇಶವ ನಗರದಲ್ಲಿ ಹೈ ವೋಲ್ಟೇಜ್ ವಿದ್ಯುತ್ ತಂತಿ ವಾಸದ ಮನೆ ಮೇಲ್ಭಾಗದಲ್ಲಿ ಹಾದುಹೋಗಿದ್ದು, ಕೂಡಲೇ ಪುರಸಭೆ ವತಿಯಿಂದ ಅಂದಾಜು ರು. 5 ಲಕ್ಷ ವೆಚ್ಚದಲ್ಲಿ ಪರ್ಯಾಯ ವ್ಯವಸ್ಥೆಗೆ ಸೂಚಿಸಿ ಈ ಬಗ್ಗೆ ಪುರಸಭೆಯಲ್ಲಿ ಅನುಮೋದನೆ ಪಡೆದು ಜನ ನಿರ್ಭೀತಿಯಿಂದ ಬದುಕಲು ವ್ಯವಸ್ಥೆ ಕಲ್ಪಿಸುವಂತೆ ಮುಖ್ಯಾಧಿಕಾರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮುಖಂಡ ಗುರುಮೂರ್ತಿ, ಸುಕೇಂದ್ರಪ್ಪ, ಹಾಲಪ್ಪ, ದೂದಿಹಳ್ಳಿ ಬಸವರಾಜ್, ಪುರಸಭಾ ಸದಸ್ಯ ಟಿ.ಎಸ್ ಮೋಹನ್, ಪಾಲಾಕ್ಷಪ್ಪ, ರವೀಂದ್ರ, ಮೊದಲಾದವರು ಈ ಸಂದಭಂದಲ್ಲಿ ಹಾಜರಿದ್ದರು.