ಖಾಸಗಿ ಶಾಲೆ ಬಣ್ಣದ ಸಂಸ್ಕೃತಿಗೆ ಮಾರು ಹೋಗದಿರಿ
ಶಿವಮೊಗ್ಗ: ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಸರ್ಕಾರಿ ಶಾಲೆಯಲ್ಲಿ ಮಾತ್ರ ಸಾಧ್ಯ. ಖಾಸಗಿ ಶಾಲೆಗಳ ಬಣ್ಣದ ಸಂಸ್ಕೃತಿಗೆ ಮಾರು ಹೋಗಬೇಡಿ ಎಂದು ನಗರಸಭಾ ಸದಸ್ಯ ಎಚ್. ಪಾಲಾಕ್ಷಿ ಹೇಳಿದರು.
ವಿನೋಬಾ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ 67ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಸರ್ಕಾರಿ ಶಾಲೆಯಲ್ಲಿ ಸೌಲಭ್ಯಗಳು ಹೆಚ್ಚುತ್ತಿದ್ದು, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುವ ಚಟುವಟಿಕೆ ನಡೆಯುತ್ತಿವೆ ಎಂದರು.
ಎಸ್ಡಿಎಂಸಿ ಅಧ್ಯಕ್ಷ ಎನ್.ಎಂ. ಮಂಜುನಾಥ್ ಮಾತನಾಡಿ, ನೆರೆಯ ಪಾಕಿಸ್ತಾನದ ದಾಳಿಗೆ ದೇಶ ನಲುಗುತ್ತಿದೆ. ಕೇಂದ್ರ ಸರ್ಕಾರ ನೆರೆಯ ರಾಷ್ಟ್ರ ಪಾಕಿಸ್ತಾನದಿಂದ ಇಷ್ಟೆಲ್ಲಾ ಅವಾಂತರ ನಡೆದರೂ ಕ್ರಮ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ. ರಾಜಕೀಯ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ ಎಂದರು.
ವಾರ್ಡ್ನ ಹಿರಿಯ ನಾಗರಿಕ ಸುಂದರ್, ಮುಖ್ಯ ಶಿಕ್ಷಕ ಎಚ್.ಎಂ. ಮಹೇಶ್ವರಪ್ಪ, ದೈಹಿಕ ಶಿಕ್ಷಕ ಪ್ರಕಾಶ್ ಜಿ.ಎಚ್. ಶಿಕ್ಷಕ ಜಿಲಾನಿಸಾಬ್, ಗ್ರೇಸಿ ಪಿಂಟೋ, ಅಕ್ಕಮಹಾದೇವಿ, ರೇಣುಕಾ, ಸಿಬ್ಬಂದಿ ಸುಮಾ, ಶಶಿಕುಮಾರ್ ಇದ್ದರು.