ಸ್ವಾತಂತ್ರ್ಯಕ್ಕಾಗಿ ಮತ್ತೊಮ್ಮೆ ಹೋರಾಟ ಮಾಡಬೇಕಿದೆ
ಶಿವಮೊಗ್ಗ: ಬ್ರಿಟಿಷರನ್ನು ಹೊಡೆದೊಡಿಸಿ ಅಂದು ಸ್ವಾತಂತ್ರ್ಯ ಪಡೆದುಕೊಂಡಿದ್ದೇವೆ. ಆದರೆ, ಇಂದು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸ್ವಾತಂತ್ರ್ಯ ಕೊಡಿಸಲು ಎಲ್ಲರೂ ಮತ್ತೊಮ್ಮೆ ಹೋರಾಟ ಮಾಡಬೇಕಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಜಿಲ್ಲಾಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಜಿಲ್ಲಾ ಸಮಿತಿ ಆಶ್ರಯದಲ್ಲಿ ಗುರುವಾರ ನಗರದ ಜಿಲ್ಲಾ ಪೊಲೀಸ್ ಸಶಸ್ತ್ರ ಪೊಲೀಸ್ ಪೆರೇಡ್ ಮೈದಾನದಲ್ಲಿ ನಡೆದ ಸ್ವಾತಂತ್ರೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು, ಸಮಾಜದಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ. ಅದನ್ನು ಕಿತ್ತುಕೊಳ್ಳುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಹೀಗಾಗಿ ಕೊನೆಯ ವ್ಯಕ್ತಿಗೆ ಬದುಕನ್ನು ಕಟ್ಟಿಕೊಡುವಂತ ಕೆಲಸ ಕೇಂದ್ರ, ರಾಜ್ಯ ಸರ್ಕಾರಗಳಿಂದ ಆಗಬೇಕು ಎಂದರು.
ಅಪ್ರತಿಮ ಸಾಧನೆ: ದೇಶದ ಎಲ್ಲಾ ಪ್ರಜೆಗಳಿಗೂ ಸಾಮಾಜಿಕ, ಆರ್ಥಿಕ, ರಾಜಕೀಯ ಸ್ವಾತಂತ್ರ್ಯ ಸಿಗಬೇಕು. ಎಲ್ಲರಿಗೂ ಸ್ವಾತಂತ್ರ್ಯ ಸಿಗಬೇಕು ಎಂಬುದು ಸ್ವಾತಂತ್ರ್ಯ ಸಂಗ್ರಾಮದ ಉದ್ದೇಶವಾಗಿತ್ತು. ಈ ಹಿನ್ನೆಲೆಯಲ್ಲಿ 67 ವರ್ಷಗಳಲ್ಲಿ ಭಾರತ ದೇಶ ಎಲ್ಲ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿದೆ ಎಂದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಲವಾರು ಜನಪರ ಯೋಜನೆಗಳನ್ನು ಹಮ್ಮಿಕೊಂಡಿದೆ. ತುಳಿತಕ್ಕೊಳಗಾದ ಜನರನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ಈಗಾಗಲೇ 10 ಸಾವಿರ ಕೋಟಿ ರುಪಾಯಿನ್ನು ಮೀಸಲಿಟ್ಟಿದೆ ಎಂದು ತಿಳಿಸಿದರು.
ನೂರಾರು ಕೋಟಿ ನಷ್ಟ: ಜಿಲ್ಲೆಯ ಎಲ್ಲಾ ಜಲಾಶಯಗಳು ತಂಬಿದ್ದು, ಲಿಂಗನಮಕ್ಕಿ ಜಲಾಶಯದಿಂದ ಭರ್ತಿ ಆಗಿರುವುದರಿಂದ 1.200 ಕೋಟಿ ರುಪಾಯಿ ಲಾಭ ಆಗಿದೆ. ಅದೇ ರೀತಿ ನೂರಾರು ಕೋಟಿ ನಷ್ಟ ಆಗಿದೆ. ಅತಿವೃಷ್ಟಿಯಿಂದ ಬತ್ತ, ಅಡಕೆ, ಜೋಳ ಹಾಳಾಗಿದ್ದು, ಜಿಲ್ಲಾಡಳಿತದಿಂದ ಪೂರ್ಣ ಮಾಹಿತಿ ಬಂದ ನಂತರ ಸರ್ಕಾರದಿಂದ ಪರಿಹಾರ ನೀಡಲಾಗುವುದು ಎಂದರು.
ಈ ಬಾರಿಯ ಮಳೆಯಿಂದ ಜಿಲ್ಲೆಯಲ್ಲಿ 400ಕ್ಕೂ ಹೆಚ್ಚು ಮನೆಗಳು ಬಿದಿದ್ದು, ಈಗಾಗಲೇ ಕೆಲ ಮನೆಗಳಿಗೆ ಪರಿಹಾರದ ಹಣ ಜಿಲ್ಲಾಡಳಿತದಿಂದ ವಿತರಿಸಲಾಗಿದೆ. ಮತ್ತಷ್ಟು ಮನೆಗಳು ಹಾನಿಯಾಗಿರುವ ಬಗ್ಗೆ ವರದಿ ದೊರಕಿದೆ. ಅಲ್ಲದೇ, ಪ್ರಾಣಿಗಳು ಅತಿವೃಷ್ಟಿಯಿಂದ ಪ್ರಾಣತೆತ್ತಿವೆ. ಈ ಕುರಿತು ಮಾಹಿತಿ ಪಡೆದು ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸುಮಾರು 2 ಸಾವಿರ ಮಕ್ಕಳಿಂದ ಸಾಮೂಹಿಕ ಕವಾಯತ್ತು ನಡೆಯಿತು.
ಕಾರ್ಯಕ್ರಮದಲ್ಲಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ವಿಧಾನಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ, ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಹೆಚ್ಚುವರಿ ಜಿಲ್ಲಾದಿಕಾರಿ ಶ್ರೀರಂಗಯ್ಯ, ಜಿಪಂ ಸಿಇಓ ಸಸಿಕಾಂತ್ ಸೆಂಥಿಲ್, ಸಂಜಯ್ ಬಿಜ್ಜೂರ್, ಎಸ್ಪಿ ಕೌಶಲೇಂದ್ರ ಕುಮಾರ್, ಹೆಚ್ಚುವರಿ ರಕ್ಷಣಾಧಿಕಾರಿ ದಯಾಳ್, ಜಿಪಂ ಅಧ್ಯಕ್ಷೆ ಗೀತಾಮಲ್ಲಿಕಾರ್ಜುನ, ಉಪಾಧ್ಯಕ್ಷೆ ಹೇಮಾಪಾವನಿ, ತಾಪಂ ಅಧ್ಯಕ್ಷೆ ದೇವಿಬಾಯಿ ಧರ್ಮನಾಯ್ಕ್, ತಹಸೀಲ್ದಾರ್ ಕೊಟ್ರೇಶ್ ಇದ್ದರು. ಕಾರ್ಯಕ್ರಮದಲ್ಲಿ ಎಂಟು ಜನರ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನಿಸಲಾಯಿತು.
ರೋಟರಿ ವಿದ್ಯಾಸಂಸ್ಥೆಯಲ್ಲಿ
ಶಿವಮೊಗ್ಗ: ರೋಟರಿ ಪೂರ್ವ ವಿದ್ಯಾಸಂಸ್ಥೆಯಲ್ಲಿ 67ನೇ ಸ್ವಾತಂತ್ರ್ಯ ದಿನಾಚರಣೆ ವೃಂಭಣೆಯಿಂದ ನಡೆಯಿತು.
ರೋಟರಿ ಪೂರ್ವ ಅಧ್ಯಕ್ಷ ಕೆ.ಎಸ್. ಪುರುಷೋತ್ತಮ್ ಧ್ವಜರೋಹಣ ಮಾಡಿದರು. ಇದೇ ಸಂದರ್ಭದಲ್ಲಿ ನಗರದ ಸ್ವಾತಂತ್ರ ಹೋರಾಟಗಾರ ಎಸ್.ಎಲ್. ಶ್ರೀರಂಗರಾಜು ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹಿಂದಿನ ಸ್ವಾತಂತ್ರ್ಯ ಹೋರಾಟದ ಘಟನೆಗಳು, ಸೆರೆವಾಸದ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು. ಎಲ್ಲಿ ಗುರು ಹಿರಿಯರಿಗೆ, ತಂದೆ-ತಾಯಿಗಳಿಗೆ ಗೌರವ ಕೊಡುತ್ತಾರೋ ಅವರು ಪರಿಪೂರ್ಣ ವ್ಯಕ್ತಿಯಾಗುತ್ತಾರೆ. ವಿದ್ಯೆ ಕಲಿಯುವುದರ ಜೊತೆಗೆ ದೇಶ ಪ್ರೇಮ ನಮ್ಮ ರಾಷ್ಟ್ರಧ್ವಜದ ಬಗ್ಗೆ ಮಾಹಿತಿ ಹಾಗೂ ಸ್ವಾತಂತ್ರ ಹೋರಾಟದ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡು, ರಾಷ್ಟ್ರಪ್ರೇಮ ಬೆಳೆಸಿಕೊಂಡು ಸಮಾಜಕ್ಕೆ ಸೇವೆ ಸಲ್ಲಿಸಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ವಿದ್ಯಾಸಂಸ್ಥೆ ಅಧ್ಯಕ್ಷ ಜಿ. ವಿಜಯಕುಮಾರ್ ಮಾತನಾಡಿ, ಮಕ್ಕಳು ಚಿಕ್ಕವರಿದ್ದಾಗಿನಿಂದಲೇ ಅವರಲ್ಲಿ ದೇಶ ಪ್ರೇಮ ಬೆಳೆಸಿದಾಗ ಆ ದೇಶ ಒಂದು ಉತ್ತಮ ಸ್ಥಿತಿಯಲ್ಲಿ ಮುನ್ನಡೆಯಲು ಸಾಧ್ಯ ಎಂದರು.
ವೇದಿಕೆಯಲ್ಲಿ ಕಡಿದಾಳ್ ಗೋಪಾಲ್, ವಿದ್ಯಾಸಂಸ್ಥೆ ಕಾರ್ಯದರ್ಶಿ ಎಂ.ಎಲ್. ಪ್ರತಾಪ್, ನಿರ್ದೇಶಕ ಎ.ಹೋ. ಮಹೇಶ್, ಮುಖ್ಯ ಶಿಕ್ಷಕಿ ಮೀನಾಕುಮಾರಿ, ಎನ್.ಎಚ್. ಶ್ರೀಕಾಂತ್, ಕೆ.ಬಿ. ರವಿಶಂಕರ್, ರಾಮಚಂದ್ರಪ್ಪ, ಎಚ್.ಬಿ. ಆದಿಮೂರ್ತಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ದೇಶ ಭಕ್ತಿಗೀತೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದರು.