ಬೆಳೆ ನಷ್ಟ ಪರಿಹಾರಕ್ಕೆ ಒತ್ತಾಯ
ಸೊರಬ: ಪಟ್ಟಣದಲ್ಲಿ ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ವತಿಯಿಂದ ಅಡಿಕೆ ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ತಹಸೀಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು.
ಈ ವರ್ಷದ ಮಳೆಗಾಲ ಕೊಳೆ ಮದ್ದು ಸಿಂಪಡಿಸಲು ಸಹಾ ಅವಕಾಶ ನೀಡಿಲ್ಲ, ಈಗಾಗಲೇ ಶೇ.80 ಭಾಗ ಅಡಿಕೆ ಉದುರಿದೆ, ಮಲೆನಾಡು ಪ್ರಾಂತ್ಯದಲ್ಲಿ 1ಹೆಕ್ಟೇರ್ಗಿಂತ ಕಡಿಮೆ ತೋಟ ಹೊಂದಿರುವ ಬೆಳೆಗಾರರೆ ಅಧಿಕವಿದ್ದು, ಅವರಲ್ಲಿ ಶೇ.75 ಭಾಗ ಹಿಡುವಳಿದಾರರಿಗೆ ಅಡಿಕೆ ಬೆಳೆಯೇ ಜೀವಾಧಾರ. ಹಾಗಾಗಿ ಮಾಡಿದ ಬೆಳೆ ಸಾಲ ಕೂಡ ತೀರಿಸಲಾರದಂತಹ ಶೋಚನೀಯ ಸ್ಥಿತಿಯಲ್ಲಿರುವ ಬೆಳೆಗಾರರ ನೆರವಿಗೆ ಸರ್ಕಾರ ಗಮನವೀಯಬೇಕು, ಕೇಂದ್ರ ಸರ್ಕಾರದ ಗೃಹ ಸಚಿವಾಲಯದ ಆದೇಶದನ್ವಯ ಬಹುವಾರ್ಷಿಕ ಬೆಳೆಗಳಿಗೆ ಪ್ರತಿ ಹೆ.ಗೆ 12 ಸಾವಿರ ಬೆಳೆ ನಷ್ಟ ಸಹಾಯ ಧನ ನೀಡಬಹುದಾಗಿದ್ದು, ಶೇ.50ಕ್ಕೂ ಹೆಚ್ಚು ಬೆಳೆ ನಾಶಗೊಂಡಿರುವ ಬೆಳೆಗಾರರಿಗೆ ಹ್ಞೆಕ್ಟೇರ್ಗೆ 12 ಸಾವಿರ ಧನ ಸಹಾಯ ನೀಡಬೇಕು ಎಂದು ಆಗ್ರಹಿಸಿದರು.