ಭಗವದ್ಗೀತಾ ಪುನಶ್ಚೇತನ ಅಭಿಯಾನ ನಾಳೆ
ಶಿವಮೊಗ್ಗ: ರಾಜ್ಯಾದ್ಯಂತ ನಡೆಯುತ್ತಿರುವ ಶ್ರೀಮದ್ ಭಗವದ್ಗೀತಾ ಪುನಶ್ಚೇತನ ಅಭಿಯಾನ ಹಾಗೂ ಪ್ರಶಿಕ್ಷಣ ಕಾರ್ಯಾಗಾರದ ಈ ಸಾಲಿನ ಜಿಲ್ಲೆಯ ಕಾರ್ಯಕ್ರಮ ಆ.18ರಂದು ಇಲ್ಲಿಯ ಸಾಗರ ರಸ್ತೆಯ ಬಿಎಸ್ಎನ್ಎಲ್ ಕಚೇರಿ ಸಮೀಪದ ಹವ್ಯಕ ಭವನದಲ್ಲಿ ಚಾಲನೆ ಪಡೆಯಲಿದೆ. ಅಂದು ಬೆಳಗ್ಗೆ 10.30ಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಎಸ್. ಕುಮಾರ್ ಕಾರ್ಯಕ್ರಮ ಉದ್ಘಾಟಿಸುವರು. ಶಿವಮೊಗ್ಗ ಹವ್ಯಕ ಸಂಘದ ಅಧ್ಯಕ್ಷ ಅಶೋಕ ಜಿ. ಭಟ್ ಮುಖ್ಯ ಅತಿಥಿಯಾಗಿ ಆಗಮಿಸುವರು. ಭಗವದ್ಗೀತಾ ಅಭಿಯಾನದ ಜಿಲ್ಲಾ ಸಮಿತಿಯ ಕಾರ್ಯಾಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ ಉಪಸ್ಥಿತರಿರುವರು. ಪ್ರಶಿಕ್ಷಣ ತಜ್ಞರಾದ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ವಿದ್ವಾನ್ ಶಂಕರ ಭಟ್, ವಾಲೆಗದ್ದೆ ಪ್ರಶಿಕ್ಷಣ ನೀಡಲಿದ್ದಾರೆ.
ಭಗವದ್ಗೀತಾ ಅಭಿಯಾನದ ಜಿಲ್ಲಾಧ್ಯಕ್ಷ ಪಿ.ಪಿ. ಹೆಗಡೆ ಸಮಾರಂಭದ ಅಧ್ಯಕ್ಷತೆ ವಹಿಸುವರು. ಶಿವಮೊಗ್ಗ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವಿನಯಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಪ್ರಶಿಕ್ಷಣಾರ್ಥಿಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಅಭಿಯಾನದ ಪ್ರಕಟಣೆ ಕೋರಿದೆ.