ವಿದ್ಯುತ್ ಅವಘಡ: ಅಪಾರ ನಷ್ಟ
ಕ.ಪ್ರ.ವಾರ್ತೆ, ಭದ್ರಾವತಿ, ಆ.16
ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ವಾಣಿಜ್ಯ ಮಳಿಗೆಯೊಂದರಲ್ಲಿ ಬೆಂಕಿ ಅನಾಹುತ ಸಂಭವಿಸಿ ಲಕ್ಷಾಂತರ ರುಪಾಯಿ ನಷ್ಟ ಉಂಟಾಗಿರುವ ಘಟನೆ ತಾಲೂಕಿನ ತಾರೀಕಟ್ಟೆ ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಇಲ್ಲಿನ ರಾಮಲಿಂಗೇಗೌಡ ಎಂಬುವವರಿಗೆ ಸೇರಿದ ಶ್ರೀ ಭೈರವೇಶ್ವರ ಪ್ರಾವಿಜನ್ ಸ್ಟೋರ್ ಮಳಿಗೆಗಳಲ್ಲಿ ದಿನಸಿ ಹಾಗೂ ಐಸ್ ಕ್ರೀಂ ಪಾರ್ಲರ್ ನಡೆಸಲಾಗುತ್ತಿತ್ತು. ಗುರುವಾರ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿದ್ದರಿಂದ ಆಕಸ್ಮಿಕವಾಗಿ ಬೆಂಕಿ ತಗುಲಿ ಅಂಗಡಿಯಲ್ಲಿದ್ದ 3 ರೆಫ್ರಿಜರೇಟರ್, ಷೋಕೇಸ್, ಪ್ಲಾಸ್ಟಿಕ್ ಸಾಮಗ್ರಿಗಳು ಹಾಗೂ ದಿನಸಿ ವಸ್ತುಗಳು ಸೇರಿದಂತೆ ಸುಮಾರು 10 ಲಕ್ಷಕ್ಕೂ ಹೆಚ್ಚು ಮೌಲ್ಯದ ಸಾಮಗ್ರಿಗಳು ಬೆಂಕಿಯಲ್ಲಿ ಸುಟ್ಟು ಹಾನಿ ಆಗಿವೆ.
ಗೋಡೆ ಬಿರುಕು: ಈ ಅಗ್ನಿ ಅನಾಹುತದಿಂದ ಅಂಗಡಿಯ 2 ರೋಲಿಂಗ್ ಶೆಟರ್ಗಳು 100 ಅಡಿ ದೂರದಲ್ಲಿ ಬಿದ್ದಿದ್ದು, ಆರ್.ಸಿ.ಸಿ ಮೇಲ್ಛಾವಣಿಯ ಹಿಂಭಾಗಕ್ಕೆ ಹೊಂದಿಕೊಂಡು ನಿರ್ಮಿಸಲಾಗಿದ್ದ ಗೋದಾಮಿಗೆ ಬೆಂಕಿ ತಗುಲಿ ಗೋದಾಮಿನ ಮೇಲ್ಛಾವಣಿಗಳು ಸಂಪೂರ್ಣ ಸುಟ್ಟುಹೋಗಿವೆ. ಅಗಂಡಿಯ ಎರಡೂ ಬದಿಯ ಗೋಡೆಗಳು ಬಿರುಕು ಬಿಟ್ಟಿವೆ.
ಸ್ಫೋಟದ ಶಬ್ದಕ್ಕೆ ಸ್ಥಳೀಯರು ಎಚ್ಚರಗೊಂಡು ಅಗ್ನಿಶಾಮಕ ಕಚೇರಿಗೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ದಳದವರು ಬೆಂಕಿ ನಂದಿಸಿ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ. ಪ್ರಕರಣ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಗ್ರಾಮಾಂತರ ಸಿಪಿಐ ಪರಶುರಾಮಪ್ಪ ಹಾಗೂ ಪಿಎಸ್ಐ ವೆಂಕಟೇಶ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಬೆಂಕಿ ಅವಘಡ ಸಂಭವಿಸಿದ ಸ್ಥಳಕ್ಕೆ ಶಾಸಕ ಎಂ.ಜೆ. ಅಪ್ಪಾಜಿ ಭೇಟಿ ನೀಡಿ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಉಂಟಾಗಿರುವ ನಷ್ಟದ ಬಗ್ಗೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.