ವಿದ್ಯುತ್‌ವ್ಯತ್ಯಯ
ಶಿವಮೊಗ್ಗ: ಮಂಗಳೂರು ವಿದ್ಯುಚ್ಚಕ್ತಿ ಸರಬರಾಜು ಕಂಪನಿಯು ಆಗಸ್ಟ್ 17ರಂದು ಬೆಳಿಗ್ಗೆ 9.30ರಿಂದ ಸಂಜೆ 6ಗಂಟೆಯವರೆಗೆ ವ್ಯವಸ್ಥೆ ಸುಧಾರಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮೆಸ್ಕಾಂನ ಘಟಕ-5ರ ವ್ಯಾಪ್ತಿಗೊಳಪಡುವ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಗೋಪಿಶೆಟ್ಟಿ ಕೊಪ್ಪ, ಟಿಪ್ಪುನಗರ, ಆರ್.ಎಂ.ಎಲ್.ನಗರ, ಮಂಡ್ಲಿ ಕೈಗಾರಿಕಾ ಪ್ರದೇಶ, ಮಂಜುನಾಥ ಬಡಾವಣೆ, ಅಣ್ಣಾನಗರ, ಮಿಳ್ಳಘಟ್ಟ, ಎನ್.ಟಿ. ರಸ್ತೆ, ಗಾರ್ಡನ್ ಏರಿಯಾ, ಬಿ.ಎಚ್.ರಸ್ತೆ, ನೆಹರು ರಸ್ತೆ ಎಡಭಾಗ ಮತ್ತು ಓ.ಟಿ.ರಸ್ತೆ, ನ್ಯೂ ಮಂಡ್ಲಿ, ಬೈಪಾಸ್ ರಸ್ತೆಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪಾಲನೆ ಮತ್ತು ನಿರ್ವಹಣೆ ವಿಭಾಗದ ಸಹಾಯಕ ಎಂಜಿನಿಯರ್ ತಿಳಿಸಿದ್ದಾರೆ.
ಸಂವಾದ ಕಾರ್ಯಕ್ರಮ
ಶಿವಮೊಗ್ಗ: ಆಗಸ್ಟ್ 18ರಂದು ಬೆಳಿಗ್ಗೆ 11ಗಂಟೆಗೆ ಶಿವಮೊಗ್ಗ ಸಾಗರ ರಸ್ತೆಯಲ್ಲಿರುವ ಡಿ.ಎ.ಆರ್ ಸಭಾಂಗಣದಲ್ಲಿ ಸಾರ್ವಜನಿಕರ ಕುಂದುಕೊರತೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈ ಸಂವಾದದಲ್ಲಿ ಜಿಲ್ಲೆಯ ನಾಗರಿಕರು, ಸಂಘಸಂಸ್ಥೆಗಳ ಪ್ರತಿನಿಧಿಗಳು ಪೊಲೀಸ್ ಇಲಾಖೆಗೆ ಸಂಬಂಧಿಸಿದಂತಹ ವೈಯಕ್ತಿಕ ಅಥವಾ ಸಾಮೂಹಿಕ ಸಮಸ್ಯೆಗಳ ಬಗೆಗೆ ತಮ್ಮ ಅವಹಾಲುಗಳನ್ನು ಸಲ್ಲಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಳೆರೋಗ ರೈತರು ಕಂಗಾಲು
ಹೊಸನಗರ: ವಿಪರೀತ ಮಳೆಯಿಂದಾಗಿ ಹೊಸನಗರ, ಸಾಗರ ಮತ್ತು ತೀರ್ಥಹಳ್ಳಿ ಭಾಗದ ಅಡಕೆ ತೋಟಗಳು ಕೊಳೆ ರೋಗದಿಂದ ಸಂಪೂರ್ಣ ನಾಶವಾಗಿದ್ದು, ರೈತರ ಹಿತರಕ್ಷಣೆಗೆ ಧಾವಿಸುವಂತೆ ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಹೊಸನಗರ ತಾಲೂಕಿನ ವಿವಿಧ ಭಾಗದಲ್ಲಿ ಕೊಳೆರೋಗಕ್ಕೆ ತುತ್ತಾದ ಅಡಕೆ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಕೊಳೆರೋಗದಿಂದ ಕೋಟ್ಯಂತರ ರುಪಾಯಿ ನಷ್ಟ ಸಂಭವಿಸಿದೆ ಎಂದರು.
ಭೀಕರ ಪರಿಸ್ಥಿತಿ: ಹಿಂದೆಂದು ಕಂಡುಬರದಷ್ಟು ಹಾನಿ ಈ ಭಾರಿ ಸಂಭವಿಸಿದೆ. ಅದರಲ್ಲೂ ಸಣ್ಣ ಮತ್ತು ಮಧ್ಯಮ ರೈತರ ಪರಿಸ್ಥಿತಿಯಂತು ದಿಕ್ಕೆಡುವಂತಾಗಿದೆ. ಸಾಂಪ್ರದಾಯಿಕ ಅಡಕೆ ಬೆಳೆಗಾರರಿಗೆ ಶೇ.50 ರಷ್ಟು ಹಾನಿ ಸಂಭವಿಸಿದ್ದು, ಮರದಿಂದ ಅಡಕೆ ಉದುರುವುದು ನಿಂತಿಲ್ಲ. ಹೀಗಾಗಿ ಫಸಲು ಕೈಗೆ ಬರುವ ಯಾವುದೇ ಲಕ್ಷಣವಿಲ್ಲ ಎಂದರು. ತಾಲೂಕಿನ ತ್ರಿಣಿವೆ, ನಗರ, ಸಂಪೇಕಟ್ಟೆ ಮತ್ತಿತರ ಭಾಗಗಳಿಗೆ ಭೇಟಿ ನೀಡಿ ಕೊಳೆ ರೋಗದ ತೀವ್ರತೆ ಬಗ್ಗೆ ಪರಿಶೀಲಿಸಿದರು. ಗುರುಶಕ್ತಿ ವಿದ್ಯಾಧರ್, ಲೀಲಕೃಷ್ಣ, ಸ್ಥಳೀಯ ಸಂಘಗಳ ಪ್ರತಿನಿಧಿಗಳು ಭಾಗವಹಿಸಿದ್ದರು.