ಸಂಸದ ರಾಘವೇಂದ್ರ ಹುಟ್ಟುಹಬ್ಬ ಆಚರಣೆ
ಕ.ಪ್ರ.ವಾರ್ತೆ, ಶಿಕಾರಿಪುರ, ಆ.16
ಸಂಸದ ರಾಘವೇಂದ್ರರ 40 ನೇ ವರ್ಷದ ಹುಟ್ಟುಹಬ್ಬವನ್ನು ಸ್ವಕ್ಷೇತ್ರ ಶಿಕಾರಿಪುರದಲ್ಲಿನ ಅಭಿಮಾನಿಗಳು, ಹಿತೈಷಿಗಳು,ಪಕ್ಷದ ಕಾರ್ಯಕರ್ತರು ಶುಕ್ರವಾರ ಆಚರಿಸಿದರು.
ಹುಟ್ಟುಹಬ್ಬದ ಅಂಗವಾಗಿ ಬೆಳಗ್ಗೆ ಸಂಸದ ರಾಘವೇಂದ್ರ ಪಟ್ಟಣದ ಮಾಳೇರಕೇರಿಯಲ್ಲಿನ ಸ್ವಗೃಹದಲ್ಲಿ ಇಷ್ಟದೇವತೆಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಅಸಂಖ್ಯಾತ ಅಭಿಮಾನಿಗಳ ಜತೆ ಕ್ಷೇತ್ರ ದೇವತೆ ಹುಚ್ಚೂರಾಯನ ಸನ್ನಿಧಿಗೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿ ಪಾದಯಾತ್ರೆ ಮೂಲಕ ಸಮೀಪದ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ತೆರಳಿ ದರ್ಶನ ಪಡೆದು, ಪಕ್ಷದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಸಮಾಜಮುಖಿ ಜೀವನ: ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಯಡಿಯೂರಪ್ಪನವರ ಆಪ್ತ ಸಹಾಯಕ, ಕೆಜೆಪಿ ತಾಲೂಕು ಸಂಘಟನಾ ಕಾರ್ಯದರ್ಶಿ ಗುರುಮೂರ್ತಿ ಮಾತನಾಡಿ, ಭಗವಂತನ ಸೃಷ್ಟಿಯ ನಿಯಮದಲ್ಲಿ ಪ್ರತಿಯೊಂದು ಜೀವಿಗೂ ಹುಟ್ಟು, ಸಾವು ಸಹಜ ಪ್ರಕ್ರಿಯೆಯಾಗಿದ್ದು, ಮನುಷ್ಯ ತನ್ನ ಜೀವನದಲ್ಲಿ ಸಮಾಜಮುಖಿಯಾಗಿ ತೊಡಗಿಸಿಕೊಳ್ಳುವ ಮೂಲಕ ಇತಿಹಾಸ ರೂಪಿಸುವ ಅವಕಾಶವನ್ನು ಕಲ್ಪಿಸಿದ್ದಾನೆ ಎಂದರು.
ಸಾಮಾಜಿಕ ಕ್ಷೇತ್ರದಲ್ಲಿನ ಪ್ರತಿಯೊಬ್ಬರಿಗೂ ಆದರ್ಶ ಅನಿವಾರ್ಯವಾಗಿದ್ದು, ಸಂಸದ ರಾಘವೇಂದ್ರರಿಗೆ ಅವರ ಪೋಷಕರು ಸಮಾಜಕ್ಕಾಗಿ ಬದುಕುವ ವಿಶೇಷ ಸಂಸ್ಕಾರ ನೀಡಿದ್ದಾರೆ ಎಂದರು.
ಕುಟುಂಬದ ಪರವಾಗಿ ಸಹೋದರ ವಿಜಯೇಂದ್ರ ಮಾತನಾಡಿ, ತಾಯಿ ಮೈತ್ರಾದೇವಿರವರು ಸಂಕಷ್ಟದ ಸಮಯದಲ್ಲಿ ತಂದೆ ಸಹಿತ ಎಲ್ಲರಿಗೂ ಧೈರ್ಯ, ಶಕ್ತಿಯ ಮಾರ್ಗದರ್ಶನದಿಂದ ಇದೀಗ ರಾಘು ಎಲ್ಲರ ನೆಚ್ಚಿನ ರಾಘಣ್ಣನಾಗಲು ಸಾಧ್ಯವಾಗಿದೆ ಎಂದು ನೆನ್ಯೊಕಂಡರು.
ಅಭಿಮಾನಿಗಳ ವಿಶೇಷ ಹಾರೈಕೆ ಸ್ವೀಕರಿಸಿ ಸಂಸದ ರಾಘವೇಂದ್ರ ಮಾತನಾಡಿದರು. ಸಂಸದನಾಗಿ ಸಾರ್ವಜನಿಕ ಸೇವೆ ಸಲ್ಲಿಸುವ ಸದಾವಕಾಶ ದೊರೆತಿದ್ದು, ಈ ಸಂದರ್ಭದಲ್ಲಿ ಜನರ ಅಪೇಕ್ಷೆ ಮೇರೆಗೆ ಸೂಕ್ತ ಅರ್ಥೈಸಿಕೊಂಡು ಕಾರ್ಯನಿರ್ವಹಿಸಿ, ಅಭಿಮಾನವನ್ನು ಸದಾಕಾಲ ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ಇದೆ ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಗಣಾಚಾರಿ, ಕಾರ್ಯಪಾಲಕ ಎಂಜಿನಿಯರ್ ರಮೇಶ್, ಲೋಕೇಶಪ್ಪ, ರಮೇಶ್ ಬಾಣದ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ತಿಪ್ಪೇಶ್, ಎಸಿಎಫ್ ವೆಂಕಟೇಶ್, ಬಿಇಒ ಸಿದ್ದಲಿಂಗಪ್ಪ, ಮುಖಂಡ ಶೇಖರಪ್ಪ, ಚನ್ನವೀರಪ್ಪ, ಸುಕೇಂದ್ರಪ್ಪ, ಹಾಲಪ್ಪ, ನಾಗರಾಜಪ್ಪ, ಶ್ರೀಧರ ನಾಡಿಗ್,ಪ್ರವೀಣ್ ಶೆಟ್ಟಿ, ಗುರುಪ್ರಸಾದ್ ದೀಕ್ಷಿತ್, ರವೀಂದ್ರ ಬಿ.ಎಲ್, ಬಾಲಕೃಷ್ಣ ಜೋಯಿಸ್,ಪುರಸಭಾ ಸದಸ್ಯ ರವೀಂದ್ರ,ಪಾಲಾಕ್ಷಪ್ಪ, ಶೋಭಾ, ಪಾರ್ವತಮ್ಮ ಮೊದಲಾದವರು ಹಾಜರಿದ್ದರು. ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳ ವತಿಯಿಂದ ಚನ್ನಕೇಶವ ನಗರದಲ್ಲಿ ಸಸಿ ನೆಡಲಾಯಿತು. ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಹಣ್ಣು ಬ್ರೆಡ್ ವಿತರಿಸಲಾಯಿತು.
ಸಂಸದ ರಾಘವೇಂದ್ರ ಹುಟ್ಟುಹಬ್ಬ ಆಚರಣೆ
ಭದ್ರಾವತಿ: ಸಂಸದ ಬಿ.ವೈ. ರಾಘವೇಂದ್ರ ಹುಟ್ಟುಹಬ್ಬದ ಅಂಗವಾಗಿ ನಗರದ ರಾಘವೇಂದ್ರ ಅಭಿಮಾನಿ ಬಳಗದ ಶುಕ್ರವಾರ ಹಳೇನಗರದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ನಂತರ ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಬ್ರೆಡ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ವಿ. ಕದಿರೇಶ್, ಮಣಿ, ಭೈರಪ್ಪಗೌಡ, ಮುಖಂಡ ಕೂಡ್ಲಿಗೆರೆ ಹಾಲೇಶ್, ವಿಶ್ವನಾಥರಾವ್, ರಂಗನಾಥ್, ಪ್ರಭಾಕರ್, ಕೆ. ಮಂಜು, ಶ್ರೀನಿವಾಸ್ ಹೇಮಾವತಿ ವಿಶ್ವನಾಥ್ರಾವ್ ಉಪಸ್ಥಿತರಿದ್ದರು.