ಪಿಂಚಣಿ ಅದಾಲತ್ ಕಾರ್ಯಕ್ರಮ
ಶಿಕಾರಿಪುರ: ಅರ್ಹ ಬಡ ಪಿಂಚಣಿದಾರರು ಸರ್ಕಾರದ ಸೌಲಭ್ಯದಿಂದ ವಂಚಿತರಾಗದಂತೆ ಅರ್ಜಿ ಸಲ್ಲಿಸಿ, ಯೋಜನೆಯ ಸದುಪಯೋಗ ಪಡಿಸಿಕೊಳ್ಳಲು ಪ್ರತಿ ತಿಂಗಳ ನಿರ್ದಿಷ್ಟ ದಿನದಂದು ತಾಲೂಕು ಕಚೇರಿಯಲ್ಲಿ ಅರ್ಜಿ ಸ್ವೀಕರಿಸುವುದಾಗಿ ಉಪವಿಭಾಗಾಧಿಕಾರಿ ಡಾ.ಬಿ. ಉದಯಕುಮಾರ್ ಶೆಟ್ಟಿ ತಿಳಿಸಿದರು.
ಶನಿವಾರ ಸಂಜೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮದನ್ಪಯ ಅರ್ಹ ಬಡ ಸೌಲಭ್ಯ ವಂಚಿತರಿಂದ ಅರ್ಜಿ ಸ್ವೀಕರಿಸಿ ಮಾತನಾಡಿದರು.
ಸದುಪಯೋಗ: ಸರ್ಕಾರ ವೃದ್ಧಾಪ್ಯ ವೇತನ, ಸಂಧ್ಯಾಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ ಮತ್ತಿತರ ಹಲವು ಯೋಜನೆ ಜಾರಿಗೊಳಿಸಿದ್ದು, ಬಡ ಜನತೆ ಈ ಸೌಲಭ್ಯದಿಂದ ಅಧಿಕಾರಿಗಳ ನಿರ್ಲಕ್ಷ್ಯ, ಅರ್ಜಿ ಸಲ್ಲಿಸುವಾಗಿನ ಲೋಪ, ವಿಳಾಸ ಬದಲಾವಣೆ, ಸ್ಥಗಿತಗೊಂಡಿರುವ ಸೌಲಭ್ಯ ಮತ್ತಿತರ ವಿವಿಧ ಬಗೆಯ ಕಾರಣದಿಂದ ಸರ್ಕಾರದ ಯೋಜನೆ ಪಡೆಯಲು ವಿಫಲರಾಗಿದ್ದು, ಈ ರೀತಿಯ ಅರ್ಹ ವಂಚಿತ ಪಿಂಚಣಿದಾರು ಪ್ರತಿ ತಿಂಗಳ ನಿರ್ದಿಷ್ಟ ದಿನದಂದು ಖುದ್ದು, ನೇರವಾಗಿ ಅರ್ಜಿ ಸಲ್ಲಿಸಿ ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಲು ತಿಳಿಸಿದರು.
ತಾಲೂಕಿನ ಅಂಜನಾಪುರದಲ್ಲಿ 17 ಅರ್ಜಿ, ಹೊಸೂರಿನಲ್ಲಿ 25 ಅರ್ಜಿ ಹಾಗೂ ಕಸಬಾ ಹೋಬಳಿಯಲ್ಲಿ 15 ಅರ್ಜಿ ಸ್ವೀಕರಿಸಿರುವುದಾಗಿ ತಿಳಿಸಿದ ಅವರು, ಸರ್ಕಾರ ನೂತನವಾಗಿ ಮೈತ್ರಿ ಯೋಜನೆಯನ್ನು ಮಂಗಳಮುಖಿಯರಿಗೆ ಹಾಗೂ ಮನಸ್ವಿನಿ ಯೋಜನೆಯನ್ನು 40 ರಿಂದ 64 ವಯೋವುತಿಯ ಅವಿವಾಹಿತ, ವಿಚ್ಚೇದಿತ ಮಹಿಳೆಯರಿಗೆ ಮಾಸಾಶನ ಜಾರಿಗೊಳಿಸಿದ್ದು, ಈ ದಿಸೆಯಲ್ಲಿ ಗ್ರಾಮೀಣ ಪ್ರದೇಶದ 12,000, ಹಾಗೂ ನಗರ ಪ್ರದೇಶದ 17,000 ಕಡಮೆ ವರಮಾನದ ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.
ಸ್ಥಳದಲ್ಲಿದ್ದ ಕೆಜೆಪಿ ಸಂಘಟನಾ ಕಾರ್ಯದರ್ಶಿ ಕೆ.ಎಸ್.ಗುರುಮೂರ್ತಿ, ಕೆಪಿಸಿಸಿ ಸದಸ್ಯ ನಗರದ ಮಹಾದೇವಪ್ಪ, ಮಾತನಾಡಿದರು.
ತಹಸೀಲ್ದಾರ್ ಪ್ರಕಾಶ್ ಗಣಾಚಾರಿ, ಕಂದಾಯ ಅಧಿಕಾರಿ ರಾಜೀವ್, ಮಂಜುನಾಥ್, ಪುರಸಭಾ ಮುಖ್ಯಾಧಿಕಾರಿ ಮನೋಹರ್, ಪಿಡ್ಲೂಡಿ ಎಇಇ ರಮೇಶ್ ಬಾಣದ್ ಮೊದಲಾದವರು ಉಪಸ್ಥಿತರಿದ್ದರು.