ಸುದ್ದಿ ಸಂಕ್ಷೇಪ
ಇಂದು ಬಜರಂಗದಳ ಸ್ನೇಹ ಮಿಲನ
ಶಿವಮೊಗ್ಗ: ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳವು ಆಗಸ್ಟ್ 18ರಂದು ಸಂಜೆ 6.30ಕ್ಕೆ ಕೋಟೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸ್ನೇಹ ಮಿಲನ ಕಾರ್ಯಕ್ರಮ ಹಮ್ಮಿಕೊಂಡಿದೆ. ಹಿಂದೂ ಜಾಗರಣಾ ವೇದಿಕೆ ರಾಜ್ಯ ಸಂಚಾಲಕ ಜಗದೀಶ್ ಕಾರಂತ್ ಪ್ರಧಾನ ಭಾಷಣ ಮಾಡುವರು. 10 ನಿಮಿಷವಾಗಿ ಮುಂಚಿತವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಬಜರಂಗದಳ ಜಿಲ್ಲಾ ಸಂಚಾಲಕ ದೀನದಯಾಳು ಕೋರಿದ್ದಾರೆ.
ನಾಳೆ ತಿಂಗಳ ಅತಿಥಿ
ಶಿವಮೊಗ್ಗ: ಕರ್ನಾಟಕ ಸಂಘವು ಆಗಸ್ಟ್ 19ರಂದು ಸಂಜೆ 5.30ಕ್ಕೆ ತಿಂಗಳ ಅತಿಥಿ ಕಾರ್ಯಕ್ರಮ ಆಯೋಜಿಸಿದ್ದು, ಹಿರಿಯ ಸಾಹಿತಿ ಸಾರಾ ಅಬೂಬಕ್ಕರ್ ಪಾಲ್ಗೊಳ್ಳುತ್ತಿದ್ದಾರೆ. ಧರ್ಮ ಮತ್ತು ಮಹಿಳೆ ಕುರಿತಾಗಿ ಅವರು ಮಾತನಾಡಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸಂಘದ ಅಧ್ಯಕ್ಷ ಎಸ್.ವಿ.ತಿಮ್ಮಯ್ಯ ವಹಿಸುವರು.
ಸಕ್ಕರೆ ಕಾರ್ಖಾನೆ ಆರಂಭಕ್ಕೆ ಒತ್ತಾಯ
ಶಿವಮೊಗ್ಗ: ಸೆಪ್ಟೆಂಬರ್ 1ಕ್ಕೆ ಎಂಪಿಎಂ ಸಕ್ಕರೆ ಕಾರ್ಖಾನೆ ಆರಂಭಿಸುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸರ್ಕಾರವನ್ನು ಒತ್ತಾಯಿಸಿದೆ. ಎಂಪಿಎಂ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿ ಸುಮಾರು 2 ಲಕ್ಷ ಟನ್ ಕಬ್ಬು ಇದ್ದು, ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್ನಲ್ಲಿ ನಾಟಿಯಾಗಿದೆ. ಕಬ್ಬಿಗೆ 12 ತಿಂಗಳುಗಳ ನಂತರ ರೈತರು ಬೇರೆ ಕಡೆ ಕಟಾವು ಮಾಡಿ ಸಾಗಿಸುತ್ತಾರೆ. ಮತ್ತು ಮೈಸೂರು ಪೇಪರ್ ಮಿಲ್ಗೆ ಪಲ್ಪ್ ತಯಾರು ಮಾಡಲು ಕಬ್ಬಿನ ಸಿಪ್ಪೆ ಹೆಚ್ಚು ಬೇಕಾಗಿರುವ ಕಾರಣ ಸೆ.1ರಿಂದಲೇ ಕಾರ್ಖಾನೆ ಆರಂಭಿಸಬೇಕು ಎಂದು ರೈತ ಸಂಘದ ಕಾರ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ್ ಆಗ್ರಹಿಸಿದ್ದಾರೆ.
ಗೊಬ್ಬರ, ಬೀಜ, ಕಳೆನಾಶಕ, ಕ್ರಿಮಿ ನಾಶಕ, ಕೂಲಿ, ಜೀವನ ವೆಚ್ಚ ಜಾಸ್ತಿಯಾಗಿರುವುದರಿಂದ 2013-14ನೇ ಸಾಲಿಗೆ ಕಾರ್ಖಾನೆಗೆ ಸಾಗಿಸುವ ಕಬ್ಬಿಗೆ ಪ್ರತಿ ಟನ್ 1ಕ್ಕೆ ನಾಲ್ಕು ಸಾವಿರ ರುಪಾಯಿ ಕೊಡಬೇಕು ಎಂಬುದು ನಮ್ಮ ಆಗ್ರಹ ಎಂದು ತಿಳಿಸಿದ್ದಾರೆ.
ಕೂಡ್ಲಿಮಠದಲ್ಲಿ ಉಪಾಕರ್ಮ
ಶಿವಮೊಗ್ಗ: ನಗರದ ಬಿ.ಬಿ. ರಸ್ತೆಯಲ್ಲಿರುವ ಶ್ರೀ ಆರ್ಯ ಅಕ್ಷೆಭ್ಯತೀರ್ಥ ಮಠದಲ್ಲಿ ಶ್ರೀ ವಸಂತ ರಾಮ ಸೇವಾ ಸಂಘದ ವತಿಯಿಂದ ದಿನಾಂಕ ಆ.20ರ ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಋಗ್ವೇದಿಗಳಿಗಾಗಿ ಉಪಾಕರ್ಮ ಮತ್ತು ನೂತನ ಉಪಾಕರ್ಮವನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತ ಮಾಧ್ವ ಬಂಧುಗಳು ಹೆಚ್ಚಿನ ಮಾಹಿತಿಗಾಗಿ ಸಂಘದ ಅಧ್ಯಕ್ಷರಾದ ಎಂ. ವೆಂಕಟೇಶ್ 9741326740 ಇವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.