'ಕಸವನ್ನು ರಸ ಮಾಡುವ ಕಲೆ ರೂಢಿಸಿಕೊಳ್ಳಿ'
ಕ.ಪ್ರ.ವಾರ್ತೆ, ಶಿರಾಳಕೊಪ್ಪ, ಆ.18
ಕಸವನ್ನು ರಸವನ್ನಾಗಿ ಮಾಡುವ ಕಲೆಯನ್ನು ಪ್ರತಿಯೊಬ್ಬ ಮಹಿಳೆಯರೂ ರೂಢಿಸಿಕೊಂಡು ಆ ಕಸವನ್ನು ಪುನರ್ಬಳಕೆ ಮಾಡಿಕೊಳ್ಳುವುದರಿಂದ ನಮ್ಮ ಆರ್ಥಿಕ ಸ್ಥಿತಿ ಉತ್ತಮ ಪಡಿಸಿಕೊಳ್ಳಲು ಸಹಕಾರಿ ಆಗುತ್ತದೆ ಎಂದು ಪಪಂ ಮುಖ್ಯಾಧಿಕಾರಿ ರಾಜ್ಕುಮಾರ್ ಹೇಳಿದರು.
ಶಿರಾಳಕೊಪ್ಪ ಪಟ್ಟಣದಲ್ಲಿ ಧ.ಗ್ರಾ. ಯೋ. ಸಂಸ್ಥೆಯ ಆಶ್ರಯದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ನಾಗರಿಕ ಪ್ರಜ್ಞಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕಾರ್ಯಕ್ರಮದ ದಿನ ಶುಚಿಮಾಡುವ ಕಾರ್ಯ ಪ್ರತಿದಿನ ನಮ್ಮ ಮನೆಯಿಂದ ಪ್ರಾರಂಭವಾಗಬೇಕು ಎಂದರು.
ವಿಶೇಷವಾಗಿ ಮಹಿಳೆಯರು ಕಸವನ್ನು ಕಂಡಕಂಡಲ್ಲಿ ಹಾಕದೇ ಸಹಕರಿಸಬೇಕು. ಪಟ್ಟಣ ಗ್ರಾಮಗಳಲ್ಲಿ ಸ್ವಚ್ಛತೆಗೆ ಮಹಿಳೆ ರುವಾರಿಯಾ ಗಬೇಕು. ಇಂದು ಎಸೆಯುವಂತಹ ಕಸ ಯಾವುದೂ ಇಲ್ಲ ಎಂಬುದನ್ನು ನಾವು ಅರಿಯಬೇಕು ಎಂದು ತಿಳಿಸಿದರು.
ಪ್ರತಿದಿನ ನಡೆಯಲಿ: ಧಗ್ರಾಯೋ ಸಂಸ್ಥೆ ಮಾಡುತ್ತಿರುವ ಕಾರ್ಯ ಸಂತಸ ತಂದಿದೆ. ಈ ಕಾರ್ಯ ಪ್ರತಿದಿನ ನಡೆಯಬೇಕು. ನಮ್ಮ ಪರಿಸರ, ನಮ್ಮ ಮನೆ ಶುಚಿಯಾಗಿ ಇರಬೇಕು ಎಂಬ ಸದುದ್ದೇಶದಿಂದ ಈ ಕಾರ್ಯ ಮಾಡುತ್ತಿರುವದು ಮಾದರಿಯಾಗಲಿದೆ ಎಂದರು.
ಪಪಂ ಸದಸ್ಯ ಸಮಿಉಲ್ಲಾ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಆರ್ಥಿಕ ಸಬಲತೆಯೊಂದಿಗೆ ಸಮಾಜದ ಸ್ವಾಸ್ಥ್ಯ ಕಾಪಾಡಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಸಮಾಜಮುಖಿ ಕಾರ್ಯವಾಗಿದೆ ಎಂದರು.
ಸೇವಾ ನಿರತೆ ಉಮಾ.ಬಿ ಮಾತನಾಡಿದರು. ಉಪತಹಸೀಲ್ದಾರ್ ಉಮೇಶ್ ಗರಡಿ, ಹೆಣ್ಣು ಮಕ್ಕಳ ಶಾಲೆ ಮುಖ್ಯ ಶಿಕ್ಷಕ ಮಂಜುನಾಯ್ಕ, ಎಸ್.ಡಿಎಂಸಿ ಅಧ್ಯಕ್ಷ ಉಮೇಶ್, ನೂತನ ವಲಯ ಅಧ್ಯಕ್ಷೆ ಪೂರ್ಣಿಮಾ, ಮಾಜಿ ವಲಯ ಅಧ್ಯಕ್ಷೆ ಅಗಡಿ ಲಕ್ಷ್ಮಿ ಇದ್ದರು.