ಬೋಧನೆ ಜತೆ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿ: ಸೋಮಶೇಖರಯ್ಯ
ಭದ್ರಾವತಿ: ಶಿಕ್ಷಕರು ಸಹಪಠ್ಯ ವಿಷಯಗಳನ್ನು ಬೋಧಿಸುವಾಗ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರವನ್ನು ಕಲಿಸುವ ಅಗತ್ಯವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಸೋಮಶೇಖರಯ್ಯ ಸಲಹೆ ನೀಡಿದರು.
ಪಟ್ಟಣದ ತರುಣ ಭಾರತಿ ವಿಶ್ವಸ್ಥ ಮಂಡಳಿ ಸ್ವಾಮಿ ವಿವೇಕಾನಂದರ 150ನೇ ವರ್ಷಾಚರಣ ಪ್ರಯುಕ್ತ ಶನಿವಾರ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿವೇಕ ಶಿಕ್ಷಕ ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದಾಗ ಮಾತ್ರ ಅವರು ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಲು ಸಾಧ್ಯ. ಪಠ್ಯ, ಸಹಪಠ್ಯ ಮತ್ತು ಸಂಸ್ಕಾರಗಳ ಬೋಧನೆ ದೊರೆತಾಗ ಮಾತ್ರ ಒಬ್ಬ ವಿದ್ಯಾರ್ಥಿಪರಿಪೂರ್ಣನಾಗಲು ಸಾಧ್ಯ ಎಂದರು. ಪರಿಪೂರ್ಣತೆಯಲ್ಲಿ ವಿಫಲ: ಅಧ್ಯಕ್ಷತೆ ವಹಿಸಿದ್ದ ಮೈಸೂರು ರಾಮಕೃಷ್ಣ ಆಶ್ರಮದ ಸ್ವಾಮಿ ವೀರೇಶಾನಂದ, ಅದರ್ಶ ಶಿಕ್ಷಕರಿಗೆ ಅನುಕರಣೀಯ ವ್ಯಕ್ತಿತ್ವ ಹಾಗೂ ಜ್ಞಾನವಿರಬೇಕು. ವಿವೇಚನಾಯುಕ್ತ ಜೀವನದ ಕೊರತೆ ಎದ್ದು ಕಾಣುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ನಾವು ಪರಿಪೂರ್ಣತೆಯತ್ತ ಹೆಜ್ಜೆ ಹಾಕುವಲ್ಲಿ ವಿಫಲರಾಗುತ್ತಿದ್ದೇವೆ ಎಂದು ಎಚ್ಚರಿಸಿದರು.
ಮೈಸೂರು ಮಹಾರಾಜ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಕೆ. ಅನಂತರಾಮು, ಡಾ. ಮಹಾಬಲೇಶ್, ಎಚ್.ಎನ್.ಶ್ರೀನಿವಾಸಮೂರ್ತಿ, ಮಧುಕರ್ ಕಾನಿಟ್ಕರ್, ಎನ್.ಎನ್. ಸುಭಾಶ್, ಷಡ್ಗುಣಾರ್ಯ ಮೊದಲಾದವರು ಉದ್ಘಾಟನಾ ಸಮಾರಂಭದಲ್ಲಿ ಹಾಜರಿದ್ದರು