ರೈತರಿಂದ ಪ್ರಶಸ್ತಿಗೆ ಅರ್ಜಿ ಆಹ್ವಾನ
ಶಿವಮೊಗ್ಗ: ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾನಿಲಯವು ಜಿಲ್ಲೆಯ ರೈತರು ಹಾಗೂ ರೈತ ಮಹಿಳೆಯರಿಂದ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಆಯ್ಕೆಯಾದ ಆಭ್ಯರ್ಥಿಗಳಿಗೆ ಅಕ್ಟೋಬರ್ ಮಾಹೆಯಲ್ಲಿ ಶಿವಮೊಗ್ಗದಲ್ಲಿ ನಡೆಯಲಿರುವ ಕೃಷಿ ಮೇಳದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಆಸಕ್ತರು ಜಂಟಿ ಕೃಷಿ ನಿರ್ದೇಶಕರ ಕಚೇರಿ ಅಥವಾ ಶಿವಮೊಗ್ಗ ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕರ ಕಚೇರಿಯಲ್ಲಿ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಸೆಪ್ಟೆಂಬರ್ 5ರೊಳಗಾಗಿ ತೋಟಗಾರಿಕಾ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08182-267015ನ್ನು ಸಂಪರ್ಕಿಸಬಹುದು.
ಸೆ.1ರಂದು ಚುನಾವಣೆ
ಭದ್ರಾವತಿ: ಅಂತರಗಂಗೆ ಸೇವಾ ಸಹಕಾರ ಸಂಘದ ಸಾಮಾನ್ಯ ಚುನಾವಣೆಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕರನ್ನು ಚುನಾಯಿಸಲು ಸೆ.1ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸಂಘದ ಕಚೇರಿ ಸ್ಥಳದಲ್ಲಿ ಚುನಾವಣೆ ನಡೆಯಲಿದೆ. ಸಾಮಾನ್ಯ ಕಾಯ್ದಿರಿಸಿದ ಪರಿಶಿಷ್ಟ ಜಾತಿ, ಪರಿಶಿಷ್ಟವರ್ಗ, ಹಿಂದುಳಿದ ವರ್ಗ ಮತ್ತು ಮಹಿಳಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆ ವಿವರ ಇಂತಿದೆ. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಆ.24, ನಾಮಪತ್ರ ಪರೀಶಿಲನೆ ನಂತರ ಅರ್ಹ ಅಭ್ಯರ್ಥಿಗಳ ಹೆಸರು ಆ.25ರಂದು ಪ್ರಕಟವಾಗಲಿದೆ. ನಾಮಪತ್ರ ವಾಪಸ್ ಪಡೆಯುವುದು ನಂತರ ಕಣದಲ್ಲಿ ಉಳಿದ ಅಭ್ಯರ್ಥಿಗಳ ಹೆಸರನ್ನು ಆ.26ರಂದು ಪ್ರಕಟಿಸಲಾಗುತ್ತದೆ. ಮತದಾನ ಸೆ.1ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ನಂತರ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಿಸಲಾಗುವುದು ಎಂದು ಚುನಾವಣಾಧಿಕಾರಿ ಎಂ.ರಘು ತಿಳಿಸಿದ್ದಾರೆ.
ವರ್ಗಾವಣೆ ತಡೆಗೆ ಸುದರ್ಶನ ಹೋಮ...!
ಶಿವಮೊಗ್ಗ: ಶಿವಮೊಗ್ಗದ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಸುದರ್ಶನ ಹೋಮ ಮಾಡಿಸಿರುವ ಪ್ರಸಂಗ ಭಾನುವಾರ ನಡೆದಿದೆ. ಹಾಲಿ ಉಪನೋಂದಾವಣಾಧಿಕಾರಿಗಳನ್ನು ವರ್ಗಾವಣೆ ಮಾಡುವ ನಿರೀಕ್ಷೆ ಇತ್ತು. ಈ ವರ್ಗಾವಣೆ ತಡೆಯಲು ಅಧಿಕಾರಿಗಳು ಕಚೇರಿಯಲ್ಲಿಯೇ ಸುದರ್ಶನ ಹೋಮ ನಡೆಸಿದ್ದಾರೆ. ಈ ಕಾರ್ಯದಲ್ಲಿ ಉಪನೋಂದಾಣಿಕಾರಿಗಳಾದ ರಂಗಸ್ವಾಮಿ, ಟೀಕಾರಾಮ್ ಸಿಂಗ್ ಸೇರಿದಂತೆ ಮಧ್ಯವರ್ತಿ, ಕಚೇರಿ ಸಿಬ್ಬಂದಿ ಭಾಗವಹಿಸಿದ್ದರು.