ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಳೆ ಹಾನಿ: ಹೆಚ್ಚಿನ ಪರಿಹಾರಕ್ಕೆ ಸಿಎಂಗೆ ಪತ್ರ

Rashmi Kasaragodu
Updated On : 20 Aug 2013, 11:04 am

ಸಾಗರ: ಮುಂಗಾರು ಮಳೆಯಿಂದ ಹಾನಿಗೊಳಗಾದ ಮಲೆನಾಡು ಪ್ರಾಂತ್ಯದ ರೈತರಿಗೆ ಹೆಚ್ಚಿನ ಪರಿಹಾರ ನೀಡುವಂತೆ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ.
ಈ ಬಾರಿಯ ಮುಂಗಾರು ಮಳೆಯು ಮಲೆನಾಡು ಪ್ರಾಂತ್ಯದಲ್ಲಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ನಷ್ಟ ಉಂಟು ಮಾಡಿದೆ. ಹೆಚ್ಚಿನ ಪ್ರಮಾಣದಲ್ಲಿ ಬಿದ್ದ ಮಳೆಯಿಂದಾಗಿ ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ, ತೀರ್ಥಹಳ್ಳಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಅಡಕೆ ತೋಟಗಳಿಗೆ ಅಪಾರ ಪ್ರಮಾಣದಲ್ಲಿ ಕೊಳೆರೋಗ ಬಂದಿದ್ದು, ಫಸಲು ಸಂಪೂರ್ಣ ನಾಶವಾಗಿರುವುದನ್ನು ಇತ್ತೀಚೆಗೆ ಕೆಲವು ಅಡಕೆ ತೋಟಗಳಿಗೆ ಭೇಟಿ ನೀಡಿ ನಾನು ಖಚಿತ ಪಡಿಸಿಕೊಂಡಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಅಡಕೆ ಫಸಲಿನ ಜೊತೆಗೆ ನಾಟಿ ಮಾಡಿದ ಬತ್ತದ ಬೆಳೆ ಸಹ ನಾಶವಾಗಿದ್ದು ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಕೊಳೆರೋಗಕ್ಕೆ ತುತ್ತಾಗಿ ಬೆಳೆ ಕಳೆದುಕೊಂಡಿರುವ ಅಡಕೆ ಬೆಳೆಗಾರರಿಗೆ ಪ್ರತಿ ಎಕರೆಗೆ ಕನಿಷ್ಠ 25 ಸಾವಿರ ಪರಿಹಾರ ನೀಡಬೇಕು.   ಬೆಳೆಗಾರರು ಕೊಳೆರೋಗಕ್ಕೆ ಮಳೆಗಾಲ ಪ್ರಾರಂಭದಲ್ಲಿ ಔಷಧಿ ಸಿಂಪಡಿಸಿದ್ದರೂ ಎರಡು ತಿಂಗಳ ಕಾಲ ಎಡಬಿಡದೆ ಸುರಿದ ಮಳೆಯಿಂದಾಗಿ ಕೊಳೆರೋಗ ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿಲ್ಲ. ಆದ್ದರಿಂದ ಬೆಳೆಗಾರರಿಗೆ ಮತ್ತೊಮ್ಮೆ ಔಷಧಿಯನ್ನು ಸಿಂಪಡಿಸಲು ಔಷಧಿಯನ್ನು ಮುಫತ್ತಾಗಿ ಕೊಡಬೇಕು. ಬತ್ತದ ಬೆಳೆಗಾರರಿಗೆ ಈಗ ನೀಡುತ್ತಿರುವ ಪರಿಹಾರ ತೀರ ಕಡಿಮೆಯಾಗಿದ್ದು, ಪ್ರತಿ ಎಕರೆಗೆ 2 ಸಾವಿರ ಪರಿಹಾರವನ್ನು ನೀಡಬೇಕು. ಈ ಎಲ್ಲಾ ಬೇಡಿಕೆಗಳನ್ನು ಪೂರೈಸುವ ಜೊತೆಗೆ ಅಗತ್ಯ ಬಿದ್ದರೆ ತೋಟಗಾರಿಕೆ ಮತ್ತು ಕೃಷಿ ಇಲಾಖೆಯಿಂದ ವರದಿಯನ್ನು ತರಿಸಿಕೊಂಡು ಮೇಲೆ ಸೂಚಿಸಿರುವಂತೆ ಅಡಕೆ ಮತ್ತು ಬತ್ತದ ಬೆಳೆಗಾರರಿಗೆ ಕೂಡಲೆ ಪರಿಹಾರ ನೀಡಬೇಕು ಎಂದು ಕಾಗೋಡು ಒತ್ತಾಯಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement