ಮೂಢನಂಬಿಕೆ, ಕಂದಾಚಾರ ದೇಶದ ಪ್ರಗತಿಗೆ ಹಿನ್ನಡೆ
ಕ.ಪ್ರ. ವಾರ್ತೆ ಶಿವಮೊಗ್ಗ ಆ.19
ಮೂಢನಂಬಿಕೆ, ಕಂದಾಚಾರಗಳು ದೇಶದ ಪ್ರಗತಿಯನ್ನು ಹಿಂದಕ್ಕೆ ತಳ್ಳುತ್ತಿರುವುದು ವಿಪರ್ಯಾಸ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ವಿಷಾದಿಸಿದರು.
ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಸೋಮವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಪಠ್ಯಕ್ರಮದನ್ವಯ 9ನೇ ತರಗತಿಗೆ ಅಳವಡಿಸಲಾದ ಗಣಿತ ಮತ್ತು ವಿಜ್ಞಾನ ವಿಷಯಗಳ ನೂತನ ಪಠ್ಯಪುಸ್ತಕಗಳ ಬಗ್ಗೆ ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಒಂದು ದಿನದ ಸಮಾಲೋಚನಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ವೈಜ್ಞಾನಿಕ ಮನೋಭಾವ ಅಗತ್ಯ: ಈ ರಾಷ್ಟ್ರಕ್ಕೆ ಬೇಕಿರುವುದು ಮೂಢನಂಬಿಕೆಗಳಲ್ಲ. ಬದಲಿಗೆ ವೈಜ್ಞಾನಿಕ ಮನೋಭಾವನೆಯ ವ್ಯಕ್ತಿಗಳು. ಆಗ ದೇಶದ ಪ್ರಗತಿ ಹೆಚ್ಚುತ್ತದೆ ಎಂದ ಅವರು, ಮೂಢನಂಬಿಕೆಗಳ ಪ್ರಭಾವದಿಂದ ಶಿಕ್ಷಕರು ಹೊರಬರಬೇಕು. ಇದರೊಂದಿಗೆ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು. ಇಂದು ರಾಷ್ಟ್ರಕ್ಕೆ ವೈಜ್ಞಾನಿಕ ಮನೋಭಾವದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಮೂಢನಂಬಿಕೆಗಳ ಪ್ರಭಾವ ಶಿಕ್ಷಕರಲ್ಲೇ ಹೆಚ್ಚಾಗಿದ್ದು, ಇದರಿಂದ ಶಿಕ್ಷಕರು ಮೊದಲು ಹೊರಗೆ ಬರಬೇಕಾಗಿದೆ ಎಂದರಲ್ಲದೇ, ಇಂದು ಮೂಢನಂಬಿಕೆಗಳನ್ನು ಪ್ರರ್ಶಿಸುವ ವ್ಯಕ್ತಿಯೇ ಪ್ರಸಿದ್ಧಿ ಪಡೆಯುತ್ತಿರುವುದು ದೇಶದ ದೊಡ್ಡ ದುರಂತ ಎಂದ ಕಾಗೋಡು ತಿಮ್ಮಪ್ಪ, ವಿಜ್ಞಾನ, ಗಣಿತ ಜೊತೆ- ಜೊತೆಯಲ್ಲಿಯೇ ಸಾಮಾನ್ಯ ಜ್ಞಾನವನ್ನು ಮೊದಲು ವಿದ್ಯಾರ್ಥಿಗಳಲ್ಲಿ ಮೂಡಿಸಿ, ವೈಜ್ಞಾನಿಕ ಚಿಂತನೆಗೆ ಆದ್ಯತೆ ನೀಡಿ. ವೈಜ್ಞಾನಿಕತೆಯೆನ್ನುವುದು ನಿರಂತರವಾಗಿ ನಡೆಯುವ ಪ್ರಕ್ರಿಯೆ. ಮಕ್ಕಳ ಮನೋಭಾವನೆಗಳನ್ನು ತಿಳಿದು ಹೊಸ ಸಂಶೋಧನೆಗಳನ್ನು ಕೈಗೊಳ್ಳುವುದಕ್ಕೆ ಶಿಕ್ಷಕರು ಮುಂದಾಗಬೇಕು ಎಂದು ಕರೆ ನೀಡಿದರು.
ಪರಿಹಾರ ಕಂಡುಕೊಳ್ಳಿ: ಬದಲಾದ ಪಠ್ಯ- ಪುಸ್ತಕಗಳ ಅನುಗುಣವಾಗಿ, ಶಿಕ್ಷಕರ ಜೊತೆ ಚರ್ಚಿಸುವ ಗುಣಗಳನ್ನು ಮಕ್ಕಳು ಬೆಳೆಸಿಕೊಳ್ಳಬೇಕು ಹಾಗೂ ನಿರಂತರವಾಗಿ ಶಿಕ್ಷಕರ ಜೊತೆ ಸಂಪರ್ಕಿಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.
ವಿಜ್ಞಾನ ಪಠ್ಯಪುಸ್ತಕ ರಚನಾ ಸಮಿತಿ ಅಧ್ಯಕ್ಷ ಪ್ರೊ. ಸುಂದರ್ರಾಮ್, ಎಲ್ಲಾ ವಿಷಯಗಳನ್ನು ಬೋಧನೆ ಮಾಡಿ ನೋಟ್ಸ್ಗಳನ್ನು ನೀಡುವ ಶಿಕ್ಷಣ ಕ್ರಮ ಬದಲಾಗಬೇಕು.
ಮಕ್ಕಳಲ್ಲಿ ಚಿಂತನಾ ಶಕ್ತಿಯನ್ನು ಬೆಳೆಸಿದಾಗ ಮಾತ್ರ ಅವರಲ್ಲಿ ಶಿಕ್ಷಣದ ಬಗ್ಗೆ ಕುತೂಹಲ ಬೆಳೆಯಲು ಸಾಧ್ಯ ಎಂದ ಅವರು, ಮಕ್ಕಳಲ್ಲಿ ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನು ಪಡೆಯುವ ಮನೋಭಾವ ಬೆಳೆಯಬೇಕು. ಹಾಗೆಯೇ, ಸಮರ್ಪಕವಾದ ಉತ್ತರಗಳನ್ನು ನೀಡುವ ಗುಣಗಳನ್ನು ಶಿಕ್ಷಕರೂ ಕೂಡ ಬೆಳೆಸಿಕೊಳ್ಳಬೇಕು.
ಪ್ರಶ್ನೆಗಳಿಗೆ ಉತ್ತರ ಸಿಗದಿದ್ದಾಗ, ನಮಗೆ ಗೊತ್ತಿಲ್ಲ ಎಂಬ ಭಾವನೆಯನ್ನು ಶಿಕ್ಷಕರು ಮುಕ್ತವಾಗಿ ಒಪ್ಪಕೊಂಡು, ಉತ್ತರಗಳನ್ನು ಹುಡುಕಬೇಕು ಎಂದು ತಿಳಿಸಿದರು. ಶಾಸಕ ಕೆ.ಬಿ. ಪ್ರಸನ್ನ ಕುಮಾರ್, ಜಿ.ಪಂ. ಸದಸ್ಯ ಕಲಗೋಡು ರತ್ನಾಕರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಎಸ್. ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಕಮಲಾಕರ್, ಉದ್ಯಮಿ ಮಂಜುನಾಥ್ ಭಂಡಾರಿ, ಡಯಟ್ ಕಾಲೇಜು ಪ್ರಾಂಶುಪಾಲ ಚಂದ್ರಮ್ಮ, ಗಣಿತ ಪಠ್ಯಕ್ರಮದ ರಚನಾ ಸಮಿತಿ ಅಧ್ಯಕ್ಷ ಡಾ. ಬಿ.ಜಿ. ವೆಂಕಟಚಲ, ವಿವಿಧ ತಾಲೂಕುಗಳ ಶಿಕ್ಷಣಾಧಿಕಾರಿ ಶಂಕರಪ್ಪ, ಸಿದ್ಧಲಿಂಗಪ್ಪ, ಹಾಲಾನಾಯ್ಕ, ನಾಗರಾಜ್, ಕೃಷ್ಣಮೂರ್ತಿ, ಪ್ರಿಯದರ್ಶಿನಿ ಸಂಸ್ಥೆಯ ಕಾರ್ಯದರ್ಶಿ ಎನ್. ರಮೇಶ್, ಪ್ರಾಂಶುಪಾಲರಾದ ಸುನೀತಾ ದೇವಿ ಮತ್ತಿತರರು ಇದ್ದರು.