'ವನ್ಯಜೀವಿ ಛಾಯಾಚಿತ್ರ ಅರಿವು ಮೂಡಿಸಿ'
ಶಿವಮೊಗ್ಗ: ಹವ್ಯಾಸಿ ಛಾಯಾಚಿತ್ರಗಾರರು ವನ್ಯಜೀವಿಗಳ ಜೀವನ ಕುರಿತ ಛಾಯಾಚಿತ್ರಗಳನ್ನು ತೆಗೆದು, ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಿದೆ ಎಂದು ವನ್ಯಜೀವಿ ಛಾಯಾಗ್ರಾಹಕ ವಿ.ಎಸ್. ವಿಶ್ವನಾಥ್ ಅಭಿಪ್ರಾಯಪಟ್ಟರು.
ಹವ್ಯಾಸಿ ಛಾಯಾಚಿತ್ರಗಾರ ಸಂಘ ನಗರದ ವೀರಶೈವ ಕಲ್ಯಾಣಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹವ್ಯಾಸಿ ಛಾಯಾಚಿತ್ರಗಾರರಿಂದ ವನ್ಯ ಸಂರಕ್ಷಣೆ ಕುರಿತಾದ ಛಾಯಾಚಿತ್ರಗಳು ಹೊರಬರಬೇಕು. ಈ ಮೂಲಕ ಸಾರ್ವಜನಿಕರಿಗೆ ವನ್ಯ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಅಪರೂಪದ ಚಿತ್ರಗಳು: ಇಂದು ಹವ್ಯಾಸಿ ಛಾಯಾಚಿತ್ರಗಾರರು ಪ್ರಾಣಿ- ಸಂಕುಲಗಳ ಜೀವನವನ್ನು ತಮ್ಮ ಛಾಯಾಚಿತ್ರಗಳಲ್ಲಿ ಸೆರೆಹಿಡಿಯಬೇಕಾಗಿದೆ ಎಂದ ಅವರು, ಹವ್ಯಾಸಿ ಛಾಯಾಚಿತ್ರಗಾರರು ತಮ್ಮ ಕ್ಯಾಮೆರಾದ ಮೂಲಕ ಸೆರೆಯಿಡಿದ ಹಲವಾರು ಚಿತ್ರಗಳು ಜನ ಮನ್ನಣೆಯನ್ನು ಗಳಿಸಿವೆ. ವಿಶ್ವದಲ್ಲಿ ನಡೆದ ಹಲವಾರು ಸ್ಪರ್ಧೆಗಳಲ್ಲಿಯೂ ಜಯಗಳಿಸಿ, ದೇಶಕ್ಕೆ ಕೀರ್ತಿಯನ್ನು ತಂದಿರುವುದು ಹೆಮ್ಮೆಯ ವಿಷಯ ಎಂದು ಹರ್ಷ ವ್ಯಕ್ತಪಡಿಸಿದರು.
ದೇಶದ ಹಲವಾರು ಅರಣ್ಯ ಪ್ರದೇಶಗಳಲ್ಲಿರುವ ವಿವಿಧ ಪ್ರಾಣಿ- ಸಂಕುಲಗಳ ಜೀವನ ಚರಿತ್ರೆಯನ್ನು ಸೆರೆಹಿಡಿಯಲು ಛಾಯಾಚಿತ್ರಗಾರರಿಂದ ಮಾತ್ರ ಸಾಧ್ಯ ಎಂದರಲ್ಲದೇ, ಇಂದು ಡಿಜಿಟಲ್ ಕ್ಯಾಮೆರಾಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಬಗೆ-ಬಗೆಯ ಛಾಯಾಚಿತ್ರಗಳನ್ನು ಸೆರೆಯಿಡಿಯಬಹುದು ಎಂದರು. ಇದೇ ಸಂದರ್ಭದಲ್ಲಿ ಹಲವಾರು ಛಾಯಾಚಿತ್ರಗಾರರ ಛಾಯಾಚಿತ್ರಗಳು ಪ್ರದರ್ಶನಗೊಂಡವು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಶೇಖರ್ ಗೌಳೇರ್, ಉಪ-ಅರಣ್ಯ ಸಂರಕ್ಷಣಾಧಿಕಾರಿ ರವಿಕುಮಾರ್ ಮತ್ತಿತರರು ಇದ್ದರು.