ಅರಸು ಸಮಾನತೆ ಕಲ್ಪಿಸಿಕೊಟ್ಟ ಮಹಾನ್ ನಾಯಕ; ರಾಜಪ್ಪ
ಸೊರಬ: ಸಾಮಾಜಿಕ ಸಮಾನತೆ ಕಲ್ಪಿಸಿಕೊಟ್ಟ ರಾಷ್ಟ್ರದ ಏಕೈಕ ಮುಖ್ಯಮಂತ್ರಿ ಡಿ. ದೇವರಾಜ್ ಅರಸ್ ವಿವಿಧ ಸಮುದಾಯಗಳ ನಡುವೆ ಬೆಳೆದು ಬಂದವರು ಎಂದು ಚಿಂತಕ ರಾಜಪ್ಪ ಮಾಸ್ತರ್ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಪಂ, ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತರ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಡಿ. ದೇವರಾಜ್ ಅರಸ್ ಅವರ 98 ನೇ ಜನ್ಮ ದಿನಾಚರಣೆಯಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಅರಸು ಪಾತ್ರ ದೊಡ್ಡದು: ತಮ್ಮ ಆಡಳಿತಾವಧಿಯಲ್ಲಿ ಸಣ್ಣ ಸಮುದಾಯಗಳ ನಾಯಕರನ್ನು ಗುರುತಿಸಿ ರಾಜಕೀಯವಾಗಿ ಬೆಳೆಸುವುದರೊಂದಿಗೆ ಅಧಿಕಾರ ನೀಡಿದವರು. ರಾಜಕೀಯ ರಂಗದಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ, ಕೇಂದ್ರ ಸಚಿವ ವೀರಪ್ಪಮೊಯ್ಲಿ, ಮಲ್ಲಿಕಾರ್ಜುನ ಖರ್ಗೆಯಂತಹ ಅನೇಕರು ಬೆಳೆಯಲು ಕಾರಣ ಅರಸರು, ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಜೊತೆಗೆ ಸಮಾಜ ಕಟ್ಟುವಲ್ಲಿ ಅವರ ಪಾತ್ರ ಬೆಟ್ಟದಷ್ಟಿದೆ ಎಂದರು.
ತಾಪಂ ಸಿಇಒ ಮಂಜುಳಾದೇವಿ ಮಾತನಾಡಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ಸರ್ಕಾರ ರೂಪಿಸುವ ಯೋಜನೆಗಳನ್ನು ಪ್ರಾಮಾಣಿಕವಾಗಿ ದೊರಕಿಸಿಕೊಟ್ಟರೆ ಮಾತ್ರ ದೇವರಾಜ್ ಅರಸ್ ಅಂತವರ ಮಹಾನ್ ನಾಯಕರಿಗೆ ಗೌರವ ಸೂಚಿಸಿದಂತಾಗುತ್ತದೆ ಎಂದು ಅವರು ತಿಳಿಸಿದರು.
ಇದೇ ವೇಳೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 2012-13ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ತಾಪಂ ಉಪಾಧ್ಯಕ್ಷೆ ನೀಲಮ್ಮ ಸುರೇಶ್ ಕಾರ್ಯಕ್ರಮ ಉದ್ಘಾಟಿಸಿದರು. ತಹಸೀಲ್ದಾರ್ ಎನ್. ತೇಜಸ್ ಕುಮಾರ್, ನೌಕರರ ಸಂಘದ ಅಧ್ಯಕ್ಷ ಎನ್. ಹೊಳೆಲಿಂಗಪ್ಪ, ಪಪಂ ಸದಸ್ಯ ಮಂಚಿ ಹನುಮಂತಪ್ಪ, ಎಂ.ಡಿ. ಉಮೇಶ್, ಪ್ರಶಾಂತ್ ಮೇಸ್ತ್ರಿ, ಜಿಪಂ ಮಾಜಿ ಉಪಾಧ್ಯಕ್ಷ ಪಾಣಿರಾಜಪ್ಪ ಮೊದಲಾದವರು ಇದ್ದರು.