ಚಿತ್ರ ರಚನಾ ಸ್ಪರ್ಧೆ
ಶಿವಮೊಗ್ಗ: ಗೋಪಾಳದ ಶ್ರೀ ರಾಮಕೃಷ್ಣ ವಿದ್ಯಾನಿಕೇತನ ಶಾಲೆ ಆವರಣದಲ್ಲಿ ಆ.25ರಂದು ಬೆಳಗ್ಗೆ 10ರಿಂದ 12 ಗಂಟೆವರೆಗೆ ಅಂತರಶಾಲಾ ಮಟ್ಟದ ವೈವಿಧ್ಯಮಯ ಗಣಪತಿ ಚಿತ್ರ ರಚನಾ ಸ್ಪರ್ಧೆ ಏರ್ಪಡಿಸಿದೆ. ಎಲ್ಕೆಜಿಯಿಂದ 10ನೇ ತರಗತಿ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪ್ರವೇಶ ಶುಲ್ಕ 20 ನಿಗದಿ ಮಾಡಿದ್ದು, ರಚನೆಗೆ ಬೇಕಾದ ಡ್ರಾಯಿಂಗ್ ಶೀಟ್ನ್ನು ಕೊಡಲಾಗುತ್ತದೆ. ಉಳಿದ ಉಪಕರಣಗಳನ್ನು ಮಕ್ಕಳೇ ತರಬೇಕು. ಭಾಗವಹಿಸಿದ ಪ್ರತಿ ಸ್ಪರ್ಧಿಗೂ ಸರ್ಟಿಫಿಕೇಟ್ ಕೊಡಲಾಗುವುದು ಹಾಗೂ ಆಕರ್ಷಕ ಬಹುಮಾನಗಳಿರುತ್ತವೆ ಎಂದು ಶಾಲೆಯ ಕಾರ್ಯದರ್ಶಿ ತಿಳಿಸಿದ್ದಾರೆ. ವಿವರಗಳಿಗಾಗಿ- 9845560531.
ನೋಂದಾವಣಿಗೆ ಸೂಚನೆ
ಶಿವಮೊಗ್ಗ: ಸಾರ್ವಜನಿಕ ಶಿಕ್ಷಣ ಇಲಾಖೆಯು ಜಿಲ್ಲೆಯಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಲ್ಲಿ ಖಾಲಿ ಇರುವ ಶಿಕ್ಷಣ ಸಂಯೋಜಕರ ಹುದ್ದೆಗಳನ್ನು ಲಿಖಿತ ಪರೀಕ್ಷೆಯ ಮೂಲಕ ಭರ್ತಿ ಮಾಡಲು ಉದ್ದೇಶಿಸಿದ್ದು, ಅರ್ಹ ಪ್ರೌಢಶಾಲಾ ಶಿಕ್ಷಕರು ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಪದವೀಧರೇತರ ಮುಖ್ಯ ಶಿಕ್ಷಕರ ವೃಂದದವರು ಆಗಸ್ಟ್ 26ರೊಳಗಾಗಿ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಹಾಗೂ ವಿವರಗಳಿಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಆಯ್ಕೆ ಪಟ್ಟಿ ಪ್ರಕಟ
ಶಿವಮೊಗ್ಗ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೊರಬದ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿನ ಬಿ. ಹುಣವಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿನ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ದೀಪ ಎನ್.ಎಂ. ಹಾಗೂ ಮೂಡುಗೋಡು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿನ ಅಂಗನವಾಡಿ ಸಹಾಯಕಿ ಹುದ್ದೆಗೆ ಸುನೀತಾ ಕೆ.ಆರ್. ಮತ್ತು ಬಂಕವಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿನ ಸಹಾಯಕಿ ಹುದ್ದೆಗೆ ಗೀತಾ ಎಂ. ಇವರನ್ನು ಆಯ್ಕೆ ಮಾಡಿದ್ದು, ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸೊರಬದ ಶಿರಾಳಕೊಪ್ಪ ರಸ್ತೆಯಲ್ಲಿರುವ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಈ ಆಯ್ಕೆಪಟ್ಟಿ ಕುರಿತು ಆಕ್ಷೇಪಣೆಗಳಿದ್ದಲ್ಲಿ ಅಭ್ಯರ್ಥಿಗಳು ಆಗಸ್ಟ್ 24ರೊಳಗೆ ಸೊರಬದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಅಗತ್ಯ ದಾಖಲೆಗಳೊಂದಿಗೆ ಲಿಖಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ವಿವರಗಳಿಗಾಗಿ ಕಚೇರಿಯನ್ನು ಸಂಪರ್ಕಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಳಿಸಿದ್ದಾರೆ.