ಹಾರ್ನಹಳ್ಳಿಯಲ್ಲಿ ಪಿಂಚಣಿ ಅದಾಲತ್
ಶಿವಮೊಗ್ಗ: ಸಾರ್ವಜನಿಕರು ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ಸೌಲಭ್ಯ ಬಯಸಿ ಲಿಖಿತವಾಗಿ ಅಥವಾ ಮೌಖಿಕವಾಗಿ ಸಲ್ಲಿಸುವ ಅಹವಾಲುಗಳನ್ನು ದಾಖಲಿಸಿಕೊಂಡು ನಾಡಕಚೇರಿ ದತ್ತಾಂಶ ಮುಖೇನ ಲಿಖಿತ ಅರ್ಜಿಗಳನ್ನು ಸ್ಥಳೀಯ ಪರಿಶೀಲನೆಗೆ ಕಳುಹಿಸಿ, ಆದ್ಯತೆ ಮೇರೆಗೆ ಪರಿಶೀಲಿಸುವುದಾಗಿ ಶಿವಮೊಗ್ಗದ ಉಪವಿಭಾಗಾಧಿಕಾರಿ ಕುಸುಮಾ ಕುಮಾರಿ ಅವರು ಹೇಳಿದರು.
ಅವರು ಶಿವಮೊಗ್ಗ ತಾಲೂಕು ಹಾರನಹಳ್ಳಿಯ ನಾಡಕಚೇರಿಗೆ ಹೊಂದಿಕೊಂಡಂತಿರುವ ಅಟಲ್ಜಿ ಜನಸ್ನೇಹಿ ಕೇಂದ್ರದಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳಡಿಯಲ್ಲಿ ಬರುವ ವಿವಿಧ ಪಿಂಚಣಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ಏರ್ಪಡಿಸಿದ್ದ ಹೋಬಳಿ ಮಟ್ಟದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಮಧ್ಯವರ್ತಿ ದೂರವಿಡಿ: ಮಾಶಾಸನ ಮಂಜೂರಾತಿ ಅರ್ಜಿಗಳನ್ನು ಮಾನವೀಯತೆಯ ಆಧಾರದ ಮೇಲೆ ಮಂಜೂರು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಅರ್ಜಿದಾರರು ಮಧ್ಯವರ್ತಿಗಳನ್ನು ದೂರವಿಟ್ಟು ನೇರವಾಗಿ ಅಧಿಕಾರಿಗಳೊಂದಿಗೆ ಸಂಪರ್ಕ ಇಟ್ಟುಕೊಳ್ಳುವಂತೆಅವರು ತಿಳಿಸಿದರು.
ರಾಷ್ಟ್ರೀಯ ಕುಟುಂಬ ಪರಿಹಾರಗಳ ಮಂಜೂರಾತಿಗೆ ಸಂಬಂದಿಸಿದ ಕಾನೂನು ತೊಡಕುಗಳನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ, ಮಾರ್ಪಾಡು ಮಾಡಲು ಪ್ರಯತ್ನಿಸುವುದಾಗಿ ಅವರು ತಿಳಿಸಿದರು. ಇದೇ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ ಮಂಜೂರಾತಿ ಆದೇಶದ ಪ್ರತಿ ಹಾಗೂ ರಾಷ್ಟ್ರೀಯ ಕುಟುಂಬ ಪರಿಹಾರದ ಬೆಕ್ ವಿತರಿಸಿದರು. ತಹಶೀಲ್ದಾರ್ ಎಚ್. ಕೊಟ್ರೇಶ್, ಉಪತಹಶೀಲ್ದಾರ್ ಹೆಚ್.ಬಿ. ಗಣೇಶ್, ರಾಜಸ್ವ ನಿರೀಕ್ಷಕ ಬಿ.ಜೆ. ಬಸವರಾಜ್ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮ ಲೆಕ್ಕಿಗರು, ಕಂದಾಯ ಇಲಾಖೆಯ ಸಿಬ್ಬಂದಿ ಸಾರ್ವಜನಿಕರು ಹಾಜರಿದ್ದರು.