ಎಲ್ಲರನ್ನು ಒಂದುಗೂಡಿಸುವ ಶಕ್ತಿ ಸಂಸ್ಕೃತಕ್ಕಿದೆ: ಪ್ರಸನ್ನಕುಮಾರ್
ಶಿವಮೊಗ್ಗ: ಸಂಸ್ಕೃತ ಜಗತ್ತಿನ ಒಂದು ಅದ್ಭುತ ಭಾಷೆ, ವೈಜ್ಞಾನಿಕವಾಗಲಿ, ಧಾರ್ಮಿಕವಾಗಲಿ, ಆಧುನಿಕವಾಗಲಿ, ಸಾಹಿತ್ಯಾತ್ಮಕವಾಗಲಿ, ವೈಚಾರಿಕವಾಗಲಿ ಹೀಗೆ ಎಲ್ಲಾ ತರಹದ ಅಂಶಗಳನ್ನು ಒಳಗೊಂಡು ಅದರ ಮೂಲಕ ಎಲ್ಲರನ್ನು ಒಂದು ಗೂಡಿಸುವ ಶಕ್ತಿ ಸಂಸ್ಕೃತಕ್ಕಿದೆ ಎಂದು ಶಿವಮೊಗ್ಗ ನಗರ ಶಾಸಕ ಕೆ.ಬಿ.ಪ್ರಸನ್ನಕುಮಾರ್ ತಿಳಿಸಿದರು.
ಊರಗಡೂರಿನ ಶಿವದುರ್ಗ ದೇವಾಲಯ ಟ್ರಸ್ಟ್, ತರುಣೋದಯ ಸಂಸ್ಕೃತ ಸೇವಾಸಂಸ್ಥೆ ಹಾಗೂ ಸಂಸ್ಕೃತ ಭಾರತೀ ಸಹಯೋಗದಲ್ಲಿ ಆಯೋಜನೆಗೊಂಡಿದ್ದ ಸಂಸ್ಕೃತ ಸಂಭಾಷಣಾ ಶಿಬಿರದ ಸಮಾರೋಪದಲ್ಲಿ ಮಾತನಾಡಿದ ಅವರು, ಶ್ರಾವಣ ಪೂರ್ಣಿಮೆ ದಿನವನ್ನು ಸಂಸ್ಕೃತ ದಿನವನ್ನಾಗಿ ಘೋಷಿಸಿದ ಅಂದಿನ ಪ್ರಧಾನಿ ಇಂದಿರಾಗಾಂಧಿಯವರಿಗೆ ಸಂಸ್ಕೃತದ ಬಗ್ಗೆ ಅಪಾರ ಗೌರವವಿತ್ತು, ಸಂಸ್ಕೃತ ಭಾಷೆ ಯಾರ ಸೊತ್ತೂ ಅಲ್ಲ ಅದನ್ನು ಯಾರು ಬೇಕಾದರು ಕಲಿಯಬಹುದು ಎಂದರು.
ಶಿವಮೊಗ್ಗ ನಗರದಲ್ಲಿ ಸಂಸ್ಕೃತ ಭಾರತೀ ಸಂಸ್ಥೆಯವರು ಕಳೆದ 30 ವರ್ಷಗಳಿಂದ ಜಾತಿ ಮತ ಬೇದವಿಲ್ಲದೆ ಎಲ್ಲರಿಗೂ ಸಂಸ್ಕೃತವನ್ನು ಕಲಿಸುತ್ತಿದ್ದಾರೆ, ಇದೊಂದು ಶ್ಲಾಘನೀಯ ಕಾರ್ಯ ಎಂದರು. ಪದ್ಮನಾಭ ಭಟ್, ಮತ್ತೂರು ಶ್ರೀನಿಧಿ, ರಾಮಸ್ವಾಮಿ, ಅ.ನಾ.ವಿಜಯೇಂದ್ರ ರಾವ್, ಮತ್ತು ಸಂಸ್ಕೃತ ಸಂಭಾಷಣಾ ಶಿಬಿರದ ಶಿಕ್ಷಕ ಅನಂತಕೃಷ್ಣ ಉಪಸ್ಥಿತರಿದ್ದರು. ಶಿಬಿರಾರ್ಥಿಗಳಿಂದ ಸಂಸ್ಕೃತದಲ್ಲಿ ವಿವಿಧ ಮನೋರಂಜನೆ ನಡೆಯಿತು. ಕಾರ್ಯಕ್ರಮದಲ್ಲಿ ಶಿಬಿರ ಸಂಯೋಜಕರಾದ ಮಂಜುಳ ನಾಗೇಶ್ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಕೀರ್ತನಾ ಪ್ರಾರ್ಥಿಸಿದರು, ಅನಘ ವಂದಿಸಿ, ಪದ್ಮಾ ದಿವಾಕರ್ ಸ್ವಾಗತಿಸಿ ನಿರೂಪಿಸಿದರು.