ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಖಾಲಿ ಜಾಗದಲ್ಲಿ ಕಸದ ಗುಡ್ಡೆ

Rashmi Kasaragodu
Updated On : 22 Aug 2013, 10:47 am


ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ  ಆ.21
ಗಾಂಧಿ ಪಾರ್ಕ್ ಬಳಿ ಇದ್ದ ತಿಂಡಿ ಗಾಡಿಗಳಿಗೆ ಕನ್ಸರ್ವೆನ್ಸಿ ರಸ್ತೆಯಲ್ಲಿ ವ್ಯವಸ್ಥೆಯಾಯಿತು. ಆದರೆ ಬಸ್ ನಿಲ್ದಾಣದ ಬಳಿ ಇರುವ ಗಾಡಿಗಳು ಮಾತ್ರ ಹಾಗೆಯೇ ಇವೆ. ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಖಾಸಗಿ ಬಸ್ ನಿಲ್ದಾಣವಾಗಿರುವ ಇಲ್ಲಿನ ಅವ್ಯವಸ್ಥೆಗಳು ಮಾತ್ರ ಹೇಳತೀರದು.
ನಗರದ ಖಾಸಗಿ ಬಸ್ ನಿಲ್ದಾಣ ನಿರ್ಮಾಣವಾಗಿ 3 ವರ್ಷಗಳು ಕಳೆದರೂ ಯಾವುದೇ ಸುಧಾರಣೆ ಕಂಡಿಲ್ಲ. ಖಾಸಗಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಸಂಜೆಯಾದರೆ ತಿಂಡಿಗಾಡಿಗಳನ್ನು ಹಾಕಲಾಗುತ್ತದೆ. ಈ ಸ್ಥಳದಲ್ಲಿ ಹೆಚ್ಚಾಗಿ ಮಾಂಸಹಾರಿ ಆಹಾರ ಮಾರಾಟ ಮಾಡುವುದರಿಂದ ಕುಡುಕರ ಹಾವಳಿ ಹೆಚ್ಚು. ಅಲ್ಲದೇ, ಎಲ್ಲೆಂದರಲ್ಲಿ ವಾಂತಿ ಮಾಡಿಕೊಂಡು ಮಲಗುತ್ತಾರೆ. ಇನ್ನು ತಿಂಡಿಗಾಡಿಗಳ ಮಾಲೀಕರು ತಮ್ಮ ತ್ಯಾಜ್ಯವಸ್ತುಗಳನ್ನು ಇಲ್ಲಿಯೇ ಬಿಸಾಡಿರುವುದರಿಂದ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಮೂಗುಮುಚ್ಚಿಕೊಂಡೇ ಓಡಾಡಬೇಕಾಗಿದೆ.
ಕಸದ ಗುಡ್ಡೆ: ನಿರ್ದಿಷ್ಟ ಜಾಗಗಳಲ್ಲಿ ಕಸದ ಸಂಗ್ರಹ ತೊಟ್ಟಿಗಳಿಲ್ಲದೇ ಮದ್ಯದ ಬಾಟಲಿಗಳು, ಪ್ಯಾಕೇಟ್ಗಳನ್ನು ಬಿಸಾಡಿ ಸ್ಥಳದಲ್ಲೇ ಕಸದ ಗುಡ್ಡೆ ಮಾಡಲಾಗಿದೆ. ಈ ತಿಂಡಿಗಾಡಿಗಳಲ್ಲಿ ಆಹಾರ ಸೇವನೆ ಮಾಡಲು ಬರುವ ವ್ಯಕ್ತಿಗಳು ಇಲ್ಲೇ ಮದ್ಯ ಸೇವನೆ ಮಾಡಿದ ಸಂದರ್ಭದಲ್ಲಿ ಸಣ್ಣ- ಪುಟ್ಟ ಗಲಾಟೆಗಳು ಕೂಡ ನಡೆದಿವೆ. ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿವೆ.
ಇಷ್ಟಾದರೂ ಈ ಬಗ್ಗೆ ಯಾವೊಬ್ಬ ಜನಪ್ರತಿನಿಧಿಯಾಗಲಿ, ಅಧಿಕಾರಿಯಾಗಲಿ ತಲೆಕೆಡಿಸಿಕೊಳ್ಳದಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ಆರ್ಎಂಎಲ್ ನಗರಕ್ಕೆ ಹೋಗುವ ರಸ್ತೆಯ ಎರಡು ಬದಿಯಲ್ಲಿ ಖಾಸಗಿ ಬಸ್ಗಳು ಸಾಲಾಗಿ ನಿಂತುಕೊಳ್ಳುವುದರಿಂದ ಇತರರಿಗೆ ಸಂಚಾರ ಮಾಡಲು ತೊಂದರೆ ಆಗುತ್ತಿದೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ.
ಅನೈತಿಕ ಚಟುವಟಿಕೆಗಳು: ಇದೇ ಸ್ಥಳದಲ್ಲಿ ಮೊದಲು ಅಗ್ನಿಶಾಮಕದಳದ ಕಚೇರಿ ಇತ್ತು. ಖಾಸಗಿ ಬಸ್ ನಿಲ್ದಾಣಕ್ಕೆ ಸ್ಥಳದ ಕೊರತೆ ಉಂಟಾದರಿಂದ
ಕಚೇರಿಯನ್ನು ತೆರವು ಮಾಡಿ ಬೇರಡೆ ಸ್ಥಳಾಂತರಿಸಲಾಯಿತು. ಆದರೆ, ಈ ಸ್ಥಳದಲ್ಲಿರುವ ವಾಟರ್ ಟ್ಯಾಂಕ್ನ್ನು ಒಡೆಯುವುದು ಬೇಡ, ಹಳೇಯ ಟ್ಯಾಂಕ್ ಉಳಿಸಿಕೊಳ್ಳಬೇಕು ಎಂದು ನಿರ್ಧರಿಸಿ ಅಂದಿನ ನಗರಸಭೆ ಅಧಿಕಾರಿಗಳು ಹಾಗೇ ಉಳಿಸಿಕೊಂಡಿದ್ದರು. ಇದೀಗ ಆ ನೀರಿನ ಟ್ಯಾಂಕ್ ಅನೈತಿಕ ಚಟುವಟಿಕೆಗಳ ತಾಣವಾಗಿದೆ.
ಸುಮಾರು ಮೂರು ಅಂತಸ್ತುಗಳ ಎತ್ತರದಲ್ಲಿ ನಿರ್ಮಾಣ ಮಾಡಿರುವ ಈ ಟ್ಯಾಂಕ್ನ್ನು ಸರಿಯಾಗಿ ಬಳಸಿಕೊಂಡರೆ, ನಗರಸಭೆ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ, ಅಕ್ಕಪಕ್ಕದ ಬಡಾವಣೆಗಳಿಗೆ ನೀರು ಪೂರೈಸಬಹುದು. ಇರುವ ಟ್ಯಾಂಕ್ ದುರಸ್ತಿ ಮಾಡಿ ಬಳಸಿಕೊಂಡರೆ ಸಾರ್ವಜನಿಕರ ಉಪಯೋಗಕ್ಕೆ ದೊರೆಯಲಿದೆ. ಆದರೆ, ಅಧಿಕಾರಿಗಳು ಮಾತ್ರ ಈ ಕಡೆ ಗಮನ ಹರಿಸುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.
ಈ ಬಗ್ಗೆ ನಗರಸಭೆ ಅಧಿಕಾರಿಗಳನ್ನು 'ಕನ್ನಡಪ್ರಭ' ಮಾತನಾಡಿಸಿದಾಗ, ಅದು ಅಗ್ನಿಶಾಮಕದಳ ಬಳಸಿಕೊಳ್ಳುತ್ತಿದ್ದ ನೀರಿನ ಟ್ಯಾಂಕ್. ಅದನ್ನು ಒಡೆಯುವುದು ಸೂಕ್ತವಲ್ಲ. ಮುಂದಿನ ದಿನಗಳಲ್ಲಿ ಬಳಕೆ ಮಾಡಿಕೊಳ್ಳಬಹುದು ಎಂದು ಅಂದಿನ ಅಧಿಕಾರಿಗಳು ತಿಳಿಸಿದ್ದರಿಂದ ಹಾಗೇ ಉಳಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ನಗರಸಭೆ ಆಯುಕ್ತ ಎಂ.ಎಂ. ಕರಭೀಮಣ್ಣನವರ, ಈ ಬಗ್ಗೆ ನಾನು ಸ್ಥಳ ಪರಿಶೀಲನೆ ಮಾಡಿ ಕ್ರಮಕೈಗೊಳ್ಳುತ್ತೇನೆ. ಈ ಸ್ಥಳದಲ್ಲಿ ಪುಸ್ತಕ ಮಳಿಗೆ ತೆರೆಯಲು ನವಕರ್ನಾಟಕ ಪಬ್ಲಿಕೇಷನ್ನಿಂದ ಪ್ರಸ್ತಾವನೆ ಬಂದಿದೆ. ಹಾಗಾಗಿ 3-4 ತಿಂಗಳ ಕಾಲ ಸ್ಥಳವನ್ನು ಅವರಿಗೆ ಬಾಡಿಗೆ ರೂಪದಲ್ಲಿ ನೀಡಲಾಗುವುದು ಎಂದು ತಿಳಿಸಿದರು.



ಕುಡಿವ ನೀರಿನ ವ್ಯವಸ್ಥೆ ಇಲ್ಲ
ಖಾಸಗಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಎಳನೀರಿನ ಬುರುಡೆ, ಪಕ್ಕದ ಚರಂಡಿ ತುಂಬಿದ ಕೊಳಚೆ, ಮುಖ್ಯವಾಗಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ನಿಲ್ದಾಣದ ಆರಂಭದಿಂದ ಕೊನೆಯವರೆಗೆ ಎಲ್ಲಿಯೂ ನೀರಿನ ವ್ಯವಸ್ಥೆ ಇಲ್ಲ. ಇರುವ ಒಂದು ವ್ಯವಸ್ಥೆಯೂ ಶೌಚಾಲಯದ ಪಕ್ಕದಲ್ಲಿದ್ದು, ಅದರ ಒಂದು ನಲ್ಲಿ ಹಾಳಾಗಿದೆ. ಅಲ್ಲದೇ, ಗಲೀಜಿನಿಂದ ತುಂಬಿದೆ. ಆದರೂ, ಬಾಯಾರಿಕೆಯ ಕಾರಣ ಜನರು ಇಲ್ಲಿಯೇ ನೀರು ಕುಡಿಯಬೇಕಾದ ಅನಿವಾರ್ಯತೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement