ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬೆಳೆಗಾರರ ಹಿತ ಕಾಯಲು ಒತ್ತಾಯಿಸಿ ಮನವಿ

Rashmi Kasaragodu
Updated On : 22 Aug 2013, 10:47 am

ಕ.ಪ್ರ.ವಾರ್ತೆ ಟಿ ಸಾಗರ ಟಿ  ಆ.21
ಕೊಳೆರೋಗ ಬಾಧೆಯಿಂದ ಬೆಳೆನಷ್ಟವುಂಟಾಗಿ ಅಡಕೆ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದು, ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಬೆಳೆಗಾರರ ಹಿತರಕ್ಷಣೆ ಮಾಡಬೇಕೆಂದು ಒತ್ತಾಯಿಸಿ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ವತಿಯಿಂದ ಮಂಗಳವಾರ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪನವರಿಗೆ ಮನವಿ ಸಲ್ಲಿಸಲಾಯಿತು.
ನಿರಂತರ ಮಳೆಯಿಂದಾಗಿ ಮಲೆನಾಡಿನ ಅಡಕೆ ತೋಟಗಳಲ್ಲಿ ಹಿಂದೆಂದೂ ಕಂಡರಿಯದಷ್ಟು ಕೊಳೆರೋಗ ವ್ಯಾಪಿಸಿದೆ. ಪರಿಣಾಮವಾಗಿ ಎಕರೆಗೆ ಸರಾಸರಿ 6 ರಿಂದ 8 ಕ್ವಿಂಟಾಲಿನಷ್ಟು ಅಡಕೆ ಉದುರಿ ಹೋಗಿದೆ. ಮಲೆನಾಡು ತಾಲೂಕುಗಳಲ್ಲಿ ಶೇ. 95ಕ್ಕೂ ಹೆಚ್ಚುಭಾಗ ಅಡಕೆ ಬೆಳೆಗಾರರ ಹಿಡುವಳಿ ಒಂದು ಹೆಕ್ಟೇರಿಗಿಂತ ಕಡಿಮೆ ಇದೆ.
ಗರಿಷ್ಠಮಟ್ಟದ ಪರಿಹಾರ ನೀಡಿ: ಅಡಕೆ ಉತ್ಪಾದನೆಯಿಂದಲೇ ತಮ್ಮ ಬದುಕನ್ನು ಕಟ್ಟಿಕೊಂಡಿರುವ ಬೆಳೆಗಾರರಿಗೆ ಈ ಬಾರಿ ಕೊಳೆರೋಗ ಶಾಪವಾಗಿ ಪರಿಣಮಿಸಿದೆ. ಆದ್ದರಿಂದ ಸರ್ಕಾರ ಬೆಳೆಗಾರರಿಗೆ ಗರಿಷ್ಠ ಮಟ್ಟದ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಹೇಳಲಾಗಿದೆ. ಅಡಕೆ ಬೆಳೆಗಾರರು ತಮ್ಮ ಆದಾಯವನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದು, ಎಕರೆಗೆ ಕನಿಷ್ಠ 50 ಸಾವಿರ ಪರಿಹಾರವಾದರೂ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಜೊತೆಗೆ ಅಡಕೆ ಮರಗಳನ್ನು ಉಳಿಸಿಕೊಳ್ಳಬೇಕಾದರೆ ಎರಡನೇ ಹಾಗೂ ಮೂರನೇ ಬಾರಿಗೆ ಬೋರ್ಡೋ ದ್ರಾವಣ ಸಿಂಪಡಣೆಗೆ ಎಕರೆಗೆ 2 ಸಾವಿರ ಸಹಾಯಧನ ನೀಡಬೇಕು. ಈ ನಿಟ್ಟಿನಲ್ಲಿ ಬೆಳೆಗಾರರ ನೆರವಿಗೆ ತಕ್ಷಣ ಧಾವಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಕ್ರಮದ ಭರವಸೆ: ಮನವಿ ಸ್ವೀಕರಿಸಿದ ಕಾಗೋಡು ತಿಮ್ಮಪ್ಪ, ಬೆಳೆಗಾರರ ಸಂಕಷ್ಟವನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಕೊಳೆರೋಗದಿಂದ ಹಾನಿಗೊಳಗಾದ ತೋಟಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಾಮರ್ಶಿಸಿದ್ದೇನೆ. ಈಗಾಗಲೆ ಬೆಳೆಗಾರರಿಗೆ ಹೆಚ್ಚಿನ ಪರಿಹಾರ ನೀಡುವಂತೆ ಮುಖ್ಯಮಂತ್ರಿಗಳಿಗೆ ಪತ್ರವನ್ನೂ ಬರೆದಿದ್ದೇನೆ. ಅಡಕೆ ಬೆಳೆಗಾರರ ವತಿಯಿಂದ ಆ.24ರೊಳಗೆ ಮುಖ್ಯಮಂತ್ರಿಯನ್ನು ಭೇಟಿಯಾಗಿ ಚರ್ಚೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಬಿ.ಆರ್. ಜಯಂತ್, ವ.ಶಂ. ರಾಮಚಂದ್ರ ಭಟ್, ಈಳಿ ನಾರಾಯಣಪ್ಪ, ದೇವಪ್ಪ, ಎಂ.ಸಿ. ರತ್ನಾಕರ ಗೌಡ, ತಿಮ್ಮಪ್ಪ, ಆರ್.ಎಸ್. ಗಿರಿ, ಮಹಾಬಲೇಶ್ವರ ಕುಗ್ವೆ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement