ಸಾಮಾನ್ಯ ಅರೋಗ್ಯ ಸಮಸ್ಯೆ ವಿಚಾರ ಸಂಕಿರಣ
ಶಿವಮೊಗ್ಗ: ಬದಲಾದ ಆಹಾರ ಕ್ರಮ, ಆಧುನಿಕ ಜೀವನ ಶೈಲಿ ಹಾಗೂ ಪರಿಸರ ಸ್ವಚ್ಛತೆ ಕೊರತೆಯಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ರೋಟರಿ ರಕ್ತನಿಧಿಯ ಮುಖ್ಯ ವೈದ್ಯಾಧಿಕಾರಿ ಡಾ. ಸಂಜಯ್ ಹೇಳಿದರು.
ಅವರು ಮಂಗಳವಾರ ಡಿವಿಎಸ್ ಸಂಜೆ ಕಾಲೇಜು ಮತ್ತು ರಾಜ್ಯ ಜ್ಞಾನ ಮತ್ತು ವಿಜ್ಞಾನ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ ನಗರದ ಡಿವಿಎಸ್ ಸಂಜೆ ಕಾಲೇಜಿನ ಸಭಾಂಗಣದಲ್ಲಿ ಸಾಮಾನ್ಯ ಅರೋಗ್ಯ ಸಮಸ್ಯೆ, ಅವುಗಳ ಪರಿಹಾರ ಕ್ರಮ ಎಂಬ ವಿಷಯದ ಕುರಿತು ಏರ್ಪಡಿಸಲಾಗಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ, ಪ್ರತಿದಿನ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಬೇಕು. ಇದೊರಂದಿಗೆ ಸಾಕಷ್ಟು ಹಸಿರು ತರಕಾರಿಗಳನ್ನು ಆರೋಗ್ಯದ ದೃಷ್ಟಿಯಿಂದ ಉತ್ತಮ ಎಂದರು.
ನಿಯಮಿತ ವ್ಯಾಯಾಮ: ಮಾನಸಿಕವಾಗಿ ಒತ್ತಡ ಕಡಿಮೆ ಮಾಡಿಕೊಳ್ಳುವುದರ ಜೊತೆಗೆ ಪ್ರತಿದಿನ ನಿಯಮಿತವಾಗಿ ಶಾರೀರಿಕ ವ್ಯಾಯಾಮ ಮಾಡುವುದನ್ನು ರೂಡಿಸಿಕೊಳ್ಳುವಂತೆ ಸಲಹೆ ನೀಡಿದ ಅವರು ಆರೋಗ್ಯದ ಕಡೆಗೆ ನಿರ್ಲಕ್ಷ್ಯ ವಹಿಸುವುದರಿಂದ ಮನುಷ್ಯನ ಜೀವಿತಾವಧಿಯು ಕಡಿಮೆಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಡಿವಿಎಸ್ ಸಂಜೆ ಕಾಲೇಜಿನ ಪ್ರಾಚಾರ್ಯ ಪ್ರೊ. ಎಚ್. ರಾಚಪ್ಪ ಅಧ್ಯಕ್ಷತೆ ವಹಿಸಿದ್ದರು. ಕಮಲಾ ನೆಹರು ಕಾಲೇಜಿನ ಪ್ರಾಂಶುಪಾಲ ಪ್ರೊ. ಸತ್ಯನಾರಾಯಣ, ಡಾ. ಪ್ರಕಾಶ್, ಲಕ್ಷ್ಮೀನಾರಾಯಣರಾವ್ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಉಮಾ ಪ್ರಾರ್ಥಿಸಿದರು. ಡಾ. ಎ.ಟಿ. ಪದ್ಮೇಗೌಡ ಸ್ವಾಗತಿಸಿದರು. ಶೇಖರನಾಯ್ಕ ವಂದಿಸಿದರು.