ಅನ್ನಭಾಗ್ಯದಲ್ಲಿ ಕಲ್ಲು...!
ಕ.ಪ್ರ.ವಾರ್ತೆ, ಹೊಸನಗರ, ಆ.22
ಸರ್ಕಾರದ ಮಹತ್ತರ ಯೋಜನೆ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯಲ್ಲಿ ಕಲ್ಲುಗಳು ಪತ್ತೆಯಾದ ಘಟನೆ ತಾಲೂಕಿನ ನಗರ ನೀಲಕಂಠೇಶ್ವರ ನ್ಯಾಯಬೆಲೆ ಅಂಗಡಿಯಲ್ಲಿ ನಡೆದಿದೆ..
ಪಡಿತರ ಅಕ್ಕಿಯಲ್ಲಿ ದೊಡ್ಡಗಾತ್ರದ ಕಲ್ಲುಗಳು ಕಂಡು ಬಂದಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಬಡವರಿಗೆ 30 ಕೆಜಿ ಅಕ್ಕಿ ನೀಡುವ ಯೋಜನೆಯನ್ನು ಸರ್ಕಾರ ಕಾರ್ಯರೂಪಕ್ಕೆ ತಂದಿದೆ. ಆದರೆ ವಿತರಣೆಯಲ್ಲಿ ಮೋಸ ಮಾಡಲಾಗುತ್ತಿದೆ ಎಂದು ಫಲಾನುಭವಿಗಳು ಆರೋಪಿಸಿದ್ದಾರೆ.
ಈ ಬಗ್ಗೆ ನ್ಯಾಯಬೆಲೆ ಅಂಗಡಿಯಲ್ಲಿ ವಿಚಾರಿಸಿದಾಗ ಇದರಲ್ಲಿ ನಮ್ಮದೇನು ತಪ್ಪಿಲ್ಲ. ಸರಬರಾಜಿನಲ್ಲೇ ಈ ವ್ಯತ್ಯಯವಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಉತ್ತಮ ಗುಣಮಟ್ಟ ಮತ್ತು ಕಲಬೆರೆಕೆ ರಹಿತ ಅಕ್ಕಿಯನ್ನು ವಿತರಿಸಬೇಕು ಮತ್ತು ಈ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಪ್ರಮುಖರಾದ ತೋಟಪ್ಪ ಗೌಡ, ಸುರೇಶ್, ಫಲಾನುಭವಿಗಳು ಈ ಸಂದರ್ಭದಲ್ಲಿ ಇದ್ದರು.