ವರ್ತುಲ ರಸ್ತೆಗೆ ವಿಸ್ತರಣೆ ಯೋಗ
ಕ.ಪ್ರ.ವಾರ್ತೆ ಶಿವಮೊಗ್ಗ ಆ.22
ಶಿವಮೊಗ್ಗ ರೇಲ್ವೆ ನಿಲ್ದಾಣದ ಮುಂಭಾಗದ ಕಿರಿದಾದ ರಸ್ತೆಯನ್ನು ಅಗಲೀಕರಣ ಮಾಡುವ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಶೀಘ್ರವೇ ರೈಲ್ವೆ ಇಲಾಖೆ ಹಾಗೂ ಜಿಲ್ಲಾಡಳಿತ ಕೂಡಿಕೊಂಡು ಸರ್ವೇಕಾರ್ಯ ನಡೆಸಲಿವೆ.
ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿಯವರು ಗುರುವಾರ ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ರೇಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಅಂತಿಮವಾಗಿ ಈ ತೀರ್ಮಾನಕ್ಕೆ ಬರಲಾಯಿತು.
ಸವಳಂಗ ರಸ್ತೆಯಿಂದ ಈಗಾಗಲೇ ರೇಲ್ವೆ ನಿಲ್ದಾಣ ಸರಹದ್ದು ಆರಂಭವಾಗುವವರೆಗೆ ರಿಂಗ್ ರಸ್ತೆ ಇದ್ದು, ಇನ್ನೂ 750 ಮೀಟರ್‌ನಷ್ಟು ರಸ್ತೆ ಅಗಲೀಕರಣವಾಗಬೇಕಾಗಿದೆ. ನಂತರ ಆ ರಸ್ತೆ ಮುಂದುವರಿದು ರೇಲ್ವೆ ನಿಲ್ದಾಣದ ವರೆಗೆ ಕಿರಿದಾಗಿದೆ. ಈ ರಸ್ತೆಯನ್ನು ಅಗಲೀಕರಣಗೊಳಿಸುವ ಜೊತೆಗೆ ರಿಂಗ್ ರಸ್ತೆಯಾಗಿ ಮಾರ್ಪಡಿಸುವ ಉದ್ದೇಶ ಹೊಂದಲಾಗಿದೆ.
ಅಧಿಕಾರಿಗಳು ಹಾಜರು: ಈ ಹಿನ್ನೆಲೆಯಲ್ಲಿ ಡಿ.ಎಚ್. ಶಂಕರಮೂರ್ತಿಯವರ ಕಚೇರಿಯಲ್ಲಿ ಸಭೆ ನಡೆಸಿದ್ದು, ರೇಲ್ವೆ ಮೈಸೂರು ವಲಯದ ಹಿರಿಯ ಅಧಿಕಾರಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿ, ಶಿವಮೊಗ್ಗ ಜಿಲ್ಲಾಧಿಕಾರಿ, ಕಾರ್ಯಪಾಲ ಅಭಿಯಂತರ, ಮೂಲಭೂತ ಸೌಕರ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿವಿಧ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು ಚರ್ಚೆ ನಡೆಸಿದರು.
ಇತ್ತೀಚೆಗಷ್ಟೇ ರೇಲ್ವೆ ಇಲಾಖೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆಯವರ ಮುಂದೆ ಈ ವಿಷಯವನ್ನು ಡಿ.ಎಚ್. ಶಂಕರಮೂರ್ತಿಯವರು ಪ್ರಸ್ತಾಪಿಸಿದ್ದರು. ಇದಕ್ಕೊಪ್ಪಿದ ಸಚಿವರು, ಈ ಕಾರ್ಯಕ್ಕೆ ಒಂದು ರೂಪಕೊಟ್ಟು ದೆಹಲಿಗೆ ಪ್ರಸ್ತಾವನೆ ತರುವಂತೆ ಸಲಹೆ ನೀಡಿದ್ದರು.
ಅದರಂತೆ, ಡಿ.ಎಚ್. ಶಂಕರಮೂರ್ತಿಯವರು ಗುರುವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಪ್ರಸ್ತಾವನೆಯನ್ನು ದೆಹಲಿಗೆ ತಲುಪಿಸಲು ತೀರ್ಮಾನಿಸಿದರು.
100 ಅಡಿಗೆ ವಿಸ್ತರಣೆ: ಸಭೆಯಲ್ಲಿ ಚರ್ಚೆಯಾದಂತೆ ಹಾಲಿ ಇರುವ 20 ಅಡಿ ರಸ್ತೆಯನ್ನು 100 ಅಡಿಗೆ ವಿಸ್ತರಿಸುವುದು, ಹೀಗೆ ವಿಸ್ತರಣೆಯಾಗ ಬೇಕಾದ ಸಂದರ್ಭದಲ್ಲಿ ರೇಲ್ವೆ ಇಲಾಖೆ ಎರಡು ವಸತಿ ಗೃಹಗಳಿಗೆ ಧಕ್ಕೆಯಾಗಲಿದ್ದು, ತಾತ್ಕಾಲಿಕವಾಗಿ ಈ ವಸತಿ ಗೃಹದಲ್ಲಿರುವವರಿಗೆ ಲೋಕೋಪಯೋಗಿ ಇಲಾಖೆ ವಸತಿ ಗೃಹದಲ್ಲಿ ಅವಕಾಶ ಕಲ್ಪಿಸುವುದು ಸೇರಿದಂತೆ ಅನೇಕ ವಿಚಾರ ಚರ್ಚೆ ನಡೆಸಲಾಯಿತು.
ಇನ್ನೆರಡು ದಿನಗಳಲ್ಲಿ ಶಿವಮೊಗ್ಗ ಜಿಲ್ಲಾಡಳಿತ ಹಾಗೂ ರೈಲ್ವೆ ಇಲಾಖೆ ಕೂಡಿಕೊಂಡು ಸರ್ವೆ ನಡೆಸಲಿದ್ದು, ನಂತರ ಸೆಪ್ಟೆಂಬರ್‌ನಲ್ಲಿ ರೈಲ್ವೆ ಇಲಾಖೆ ಅಧಿಕಾರಿಗಳು ಶಿವಮೊಗ್ಗ ಭೇಟಿಕೊಟ್ಟು ಪರಿಶೀಲನೆ ನಡೆಸಲಿದ್ದಾರೆ. ನಂತರ ಪ್ರಸ್ತಾವನೆಯನ್ನು ರೈಲ್ವೆ ಇಲಾಖೆಗೆ ಸಲ್ಲಿಸಿ, ಅನುಮೋದನೆ ಪಡೆಯಲಾಗುತ್ತದೆ ಎಂದು ಡಿ.ಎಚ್. ಶಂಕರಮೂರ್ತಿ ಕನ್ನಡಪ್ರಭಕ್ಕೆ ವಿವರಿಸಿದರು.
100 ಅಡಿ ರಸ್ತೆಯಲ್ಲಿ ಆಗಬೇಕಾದ ಕಾಮಗಾರಿಗೆಂದು ಹಣ ಮೀಸಲಾಗಿದೆ. ಹೀಗಾಗಿ ಹಣದ ಪ್ರಶ್ನೆ ಇಲ್ಲಿ ಬರುವುದಿಲ್ಲ. ಎರಡು ವಸತಿ ಗೃಹಗಳನ್ನು ತೆಗಿಸಿ, ಹಾಲಿ ಇರುವ ನೂರು ಅಡಿ ರಸ್ತೆಯನ್ನು ಕೆಇಬಿ ವೃತ್ತದವರೆಗೆ ವಿಸ್ತರಿಸುವ ಉದ್ದೇಶವಿದೆ. ಹೀಗೆ ಮಾಡಿದರೆ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು.
ಬಹುಪಯೋಗಿ: ರಿಂಗ್ ರಸ್ತೆಯು ಮುಂದುವರಿದು ಕೆಇಬಿ ವೃತ್ತದ ವರೆಗೆ ವಿಸ್ತರಣೆಗೊಂಡರೆ ಶಿವಮೊಗ್ಗ ನಗರದೊಳಗೆ ಸವಳಂಗ ರಸ್ತೆ ಮೂಲಕ ಸಂಚರಿಸುವ ಭಾರೀ ವಾಹನಗಳು ನಿಯಂತ್ರಣವಾಗುತ್ತದೆ. ಅದೇ ರೀತಿ ಸವಳಂಗ ರಸ್ತೆ ಮುಖಾಂತರ ಶಿವಮೊಗ್ಗ ನಗರವನ್ನು ಹಾದು ಬೆಂಗಳೂರು, ಭದ್ರಾವತಿ, ಎನ್.ಆರ್.ಪುರ, ತೀರ್ಥಹಳ್ಳಿ ಕಡೆ ಹೋಗಬೇಕಾದ ವಾಹನಗಳು ಈ ರಿಂಗ್ ರಸ್ತೆ ಬಳಸಿ ಸುಲಭವಾಗಿ ಸಂಚರಿಸಲು ಅವಕಾಶವಾದಂತಾಗುತ್ತದೆ.